ಮೈಸೂರು: ಹುಣಸೂರು ತಾಲೂಕಿನಲ್ಲಿ ಐದು ಸಾವಿರ ಎಕರೆಗಿಂತಲೂ ಹೆಚ್ಚು ಮಾಜಿ ಸೈನಿಕರಿಗಾಗಿ ಮೀಸಲಿಟ್ಟ ಜಮೀನನ್ನು ಅಲ್ಲಿನ ಸ್ಥಳೀಯ ರೈತರು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು ಮಾಜಿ ಸೈನಿಕರಿಗೆ ಅನ್ಯಾಯವಾಗುತ್ತಿದೆ. ಸರಕಾರವು ಈ ಕೂಡಲೇ ಜಮೀನನ್ನು ರೈತರಿಂದ ಮುಕ್ತಗೊಳಿಸಿ ಮಾಜಿ ಸೈನಿಕರಿಗೆ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಮಂಗಳವಾರ ಹುಣಸೂರಿನಲ್ಲಿ ಮಾಜಿ ಸೈನಿಕರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಪಾದಯಾತ್ರೆಯಲ್ಲಿ ಯಾರೆಲ್ಲ ಭಾಗಿ?
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಮೈಸೂರು ಜಿಲ್ಲಾಧ್ಯಕ್ಷರು ದಿವಾಕರ್ ಕೆ.ಪಿ, ಮೈಸೂರು ಜಿಲ್ಲಾ ಸಶಸ್ತ್ರ ಸೇನಾ ಪಡೆ ಸಂಘದ ಅಧ್ಯಕ್ಷ ಬಿದ್ದಪ್ಪ ಬಿ.ಕೆ, ಮೈಸೂರು ಕೊಡಗು ಗೌಡ ಮಾಜಿ ಸೈನಿಕರ ಸಂಘ ಅಧ್ಯಕ್ಷ ಬಸಪ್ಪ ಸಿ.ಕೆ, ಮಾಜಿ ಸೈನಿಕರ ಸಂಘ ಮೈಸೂರು ಈಸ್ಟ್ ಅಧ್ಯಕ್ಷ ಅಯ್ಯಪ್ಪ ಕಾಂಜಿತಂಡ ಹಾಗೂ ಮೈಸೂರು ಮಿಲಿಟರಿ ವೆಟರನ್ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ್ ಪಿ ಸೇರಿದಂತೆ ಒಟ್ಟು ಮೈಸೂರಿನ ಐದು ಸಂಘಗಳು ಒಂದಾಗಿ ಮೈಸೂರು ಜಿಲ್ಲಾ ಮಾಜಿ ಸೈನಿಕರ ಒಕ್ಕೂಟ ನಿರ್ಮಿಸಿ ಮಾಜಿ ಸೈನಿಕರ ರಾಜ್ಯಾಧ್ಯಕ್ಷ ಡಾ ಎನ್.ಕೆ. ಶಿವಣ್ಣ ಅವರ ನೇತೃತ್ವದಲ್ಲಿ ಐದು ಜಿಲ್ಲಾಧ್ಯಕ್ಷರ ಸಹಯೋಗದೊಂದಿಗೆ ಹುಣಸೂರಿನಲ್ಲಿ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಮುನ್ನೂರಕ್ಕೂ ಅಧಿಕ ಮಾಜಿ ಸೈನಿಕರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪಾದಯಾತ್ರೆ ಹುಣಸೂರಿನ ಹಳೆ ಬಸ್ ನಿಲ್ದಾಣದಿಂದ ದಿವಂಗತ ದೇವರಾಜ ಅರಸು ಅವರ ಪ್ರತಿಮೆಯವರೆಗೂ ಸಾಗಲಿದೆ. ಬಳಿಕ ದೇವರಾಜು ಅರಸು ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ನಂತರ ಉಪ ವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ. ನಂತರ ಮಾಜಿ ಸೈನಿಕರೆಲ್ಲರೂ ಮೈಸೂರಿಗೆ ಬಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ.