ನ್ಯೂಸ್ ನಾಟೌಟ್: ಹಳ್ಳಿ ಜನರ ಕಷ್ಟ ಕಾರ್ಪಣ್ಯಗಳ ಪರಿಹಾರ, ತುರ್ತು ಸಂದರ್ಭದಲ್ಲಿ ನೆರವು ಸೇರಿದಂತೆ ಹತ್ತು ಹಲವು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಮ ಪಂಚಾಯತ್ ಮಿನಿ ವಿಧಾನ ಸೌಧದಂತೆ ಗ್ರಾಮ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತದೆ. ಆದರೆ ಅಭಿವೃದ್ಧಿಯ ಟ್ರ್ಯಾಕ್ ಬಿಟ್ಟು ಪಂಚಾಯತ್ ನ ಆಡಳಿತ ವಿಭಾಗ ಬೇರೆ ಕಡೆ ಹೊರಳಿದಾಗ ಏನೆಲ್ಲ ಅನಾಹುತವಾಗುತ್ತದೆ ಅನ್ನುವುದಕ್ಕೆ ಸಂಪಾಜೆ ಗ್ರಾಮ ಪಂಚಾಯತ್ ಇದೀಗ ಪ್ರತ್ಯಕ್ಷ ಉದಾಹರಣೆಯಾಗಿ ಬಿಟ್ಟಿದೆ.
ಹಾಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಆಡಳಿತದಲ್ಲಿ ಸಂಪಾಜೆ ಗ್ರಾಮಕ್ಕೆ ಹಲವು ಪ್ರಶಸ್ತಿಗಳು ಲಭಿಸಿದೆ. ರಾಜ್ಯ ಮಟ್ಟದಲ್ಲೂ ಸಂಪಾಜೆ ಗ್ರಾಮ ಗುರುತಿಸಿಕೊಂಡಿದೆ. ಸಮಯ ನೋಡದೆ ಕೆಲಸ ಮಾಡುವ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಆಡಳಿತಗಾರ ಎಂದು ಊರಿನ ಹಲವು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಸೋಮಶೇಖರ ಕೊಯಿಂಗಾಜೆ ಕೂಡ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಸಂಪಾಜೆ ಗ್ರಾಮದಲ್ಲಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕಳೆದ ಕಲವು ತಿಂಗಳಿನಿಂದ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡುವ ವಿಚಾರದಲ್ಲಿ ಕಾಂಗ್ರೆಸ್ನ ಜಿ.ಕೆ.ಹಮೀದ್ ಹಾಗೂ ಸೋಮಶೇಖರ್ ನಡುವೆ ಹೊತ್ತಿಕೊಂಡ ಭಿನ್ನಾಭಿಪ್ರಾಯದ ಕಿಡಿ ಇನ್ನೂ ಆರಿಲ್ಲ. ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಹಿರಂಗವಾಗಿ ದೊಡ್ಡ ಮಟ್ಟದಲ್ಲಿ ಆಕ್ರೋಶ ಸ್ಫೋಟಗೊಂಡಿದೆ. ಮಾತಿನ ಸಮರದಲ್ಲಿ ಜಿ.ಕೆ ಹಮೀದ್ ಹಾಗೂ ಸೋಮಶೇಖರ್ ಪರಸ್ಪರ ಬೈದಾಡಿಕೊಂಡಿದ್ದಾರೆ. ಬಾಯಿ ಮುಚ್ಚಿ ಕುಳಿತುಕೊ…, ಯಾರ ಹಣೆಬರಹ ಏನು ಅಂತ ಗೊತ್ತಿದೆ…, ಅಪ್ಪನಿಗೆ ಹುಟ್ಟಿದ್ರೆ ಹೊರಗೆ ಬಾ…, ನನ್ನ ಹಣೆ ಬರಹ ನಿರ್ಧರಿಸಲು ನೀನು ಯಾರು?… ಬಾ ವಿಷ್ಣುಮೂರ್ತಿ ಚಾವಡಿಗೆ… ಹೀಗೆ ಸಭೆಯುದ್ಧಕ್ಕೂ ರೋಷಾವೇಷದ ಸುರಿಮಳೆ ಹೊರಬಿದ್ದಿದೆ.
ಮುಂಬರುವ ದಿನಗಳಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದಂತಹ ಗಂಭೀರ ವಿಚಾರದ ಬಗ್ಗೆ ಸಂಪಾಜೆಯಲ್ಲಿ ಚಿಂತನ-ಮಂಥನ ನಡೆಯಬೇಕಿತ್ತು. ತುರ್ತು ಸಂದರ್ಭ ಎದುರಾದರೆ ಜನರ ರಕ್ಷಣೆಗೆ ಏನು ಮಾಡಬಹುದು ಅನ್ನುವುದರ ಚರ್ಚೆ ಸಂಪಾಜೆ ಜನರಿಗೆ ಅವಶ್ಯಕವಾಗಿದೆ. ಕಳೆದ ವರ್ಷ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಇನ್ನೂ ಮನೆ ಆಗಿಲ್ಲ. ಈ ವರ್ಷವೂ ಮಳೆಗಾಲದಲ್ಲಿ ಗಂಜಿ ಕೇಂದ್ರದಲ್ಲಿ ಆ ಕುಟುಂಬಗಳು ಉಳಿದುಕೊಳ್ಳುವ ಆತಂಕದಲ್ಲಿದೆ. ಇಂತಹ ಸ್ಥಿತಿಯಲ್ಲಿರುವ ಸಂಪಾಜೆಯಲ್ಲಿ ಜವಾಬ್ದಾರಿಯುತ ನಾಯಕರು ಅಸಮಾಧಾನ ಹೊರಹಾಕಿಕೊಂಡು ಬಹಿರಂಗವಾಗಿ ಕಿರುಚಾಡಿಕೊಂಡರೆ ಏನು ಪ್ರಯೋಜನ? ಅನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ.