ನ್ಯೂಸ್ ನಾಟೌಟ್:ರಾಜ್ಯದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು,ಇನ್ನು ಕೆಲವು ಕಡೆಗಳಲ್ಲಿ ಮಳೆಯಾಗಿದೆ ಎಂದು ವರದಿಯಾಗಿದೆ.ಉರಿಬಿಸಿಲಿಗೆ ಕಂಗಾಲಾಗಿದ್ದ ಜನ ಮಳೆರಾಯನ ಆಗಮನದಿಂದ ಕೊಂಚ ನಿರಾಳರಾಗಿದ್ದಾರೆ.
ರಾಜ್ಯದ ಕೆಲವು ಭಾಗದಲ್ಲಿ ವರ್ಷದ ಮೊದಲ ಮಳೆಯಾಗಿದ್ದು ರೈತರ ಮುಖದಲ್ಲಂತು ಮಂದಹಾಸ ಮೂಡಿದೆ. ಬಿಸಿಲಿನಿಂದ ತತ್ತರಿಸಿದ ಮಲೆನಾಡಿಗೆ ವರುಣ ದೇವ ತಂಪೆರೆಸಿದ್ದಾನೆ. ಕೊಡಗು ಜಿಲ್ಲೆಯ ನಾಪೊಕ್ಲು ಸೇರಿದಂತೆ ಮಲೆನಾಡಿನ ಹಲವೆಡೆ ಸಾಧಾರಣ ಮಳೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಅನಿರೀಕ್ಷಿತವಾಗಿ ಮಳೆಗೆ ದಿನಗೂಲಿ ಕಾರ್ಮಿಕರು,ಶಾಲಾ ಮಕ್ಕಳು,ಆಫೀಸ್ ಕೆಲಸಕ್ಕೆ ಹೋದವರು ಪರದಾಡಿದರು. ಆದರೆ ಮೊದಲ ಮಳೆಯಿಂದ ರೈತ ವರ್ಗ ಹರ್ಷಗೊಂಡಿದೆ. ಬೆಳೆಗಾರರು ಈ ಸಮಯದಲ್ಲಿ ಕಾಫಿ ಮತ್ತು ಕರಿಮೆಣಸು ಕೊಯ್ಲು ಕಾರ್ಯ ಮುಗಿಸಿ ಉತ್ತಮ ಮಳೆಯಿಂದ ಮುಂದಿನ ಫಲವನ್ನು ಪಡೆಯಲು ಸಿದ್ದತೆ ನಡೆಸಿರುವುದರಿಂದ ಅವರಿಗೆ ಈ ಮಳೆ ಖುಷಿ ನೀಡಿದೆ. ಮೂಡಿಗೆರೆ, ನಾಪೋಕ್ಲು, ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಮಳೆಯಾದ ಬಗ್ಗೆ ವರದಿಯಾಗಿದೆ.