ನ್ಯೂಸ್ ನಾಟೌಟ್ : ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದ್ದು,ನಾಡಿಗೆ ಬಂದು ರಾಜಾರೋಷವಾಗಿ ತಿರುಗಾಡುತ್ತಿವೆ.ಕಡಬ ತಾಲೂಕಿನಲ್ಲಿಇದೀಗ ಚಿರತೆ ಹಾವಳಿ ಹೆಚ್ಚಾಗಿದ್ದು,ರಾತ್ರಿ ವೇಳೆ ಸಾಕು ನಾಯಿಯನ್ನೇ ಹೊತ್ತೊಯ್ದ ಘಟನೆ ನಡೆದಿದೆ.ಈ ದೃಶ್ಯ ಸಿಸಿ ಕ್ಯಾಮರಾದಲ್ಲಿಯೂ ಸೆರೆಯಾಗಿದೆ.ಈ ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.
ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ಈ ಘಟನೆ ನಡೆದಿದ್ದು,ವೆಂಕಟಪುರ ಲೀಲಾವತಿ ದೇವರಾಜ್ ಅವರ ಮನೆಯ ಸಾಕು ನಾಯಿಯನ್ನು ತಡರಾತ್ರಿ ಚಿರತೆ ದಾಳಿ ನಡೆಸಿ ಹೊತ್ತೊಯ್ದಿದೆ. ಮನೆಯ ಎರಡು ಸಾಕು ನಾಯಿಗಳು ಮನೆ ಗೇಟ್ ನಿಂದ ಹೊರಗಡೆ ಇದ್ದಾಗ ಈ ವೇಳೆ ಅಲ್ಲೇ ಸಮೀಪದಲ್ಲಿ ಹೊಂಚು ಹಾಕಿದ್ದ ಚಿರತೆ ದಾಳಿ ನಡೆಸಿ ಒಂದು ನಾಯಿಯನ್ನು ಹೊತ್ತೊಯ್ದ ಪ್ರಸಂಗ ನಡೆದಿದೆ.
ಇದೇನಿದು ಶಬ್ದ ಎಂದು ಎಚ್ಚೆತ್ತುಕೊಂಡು ಅಲ್ಲಿನ ಕೆಲಸದಾಳು ತಕ್ಷಣ ಬಾಗಿಲು ತೆರೆದು ಹೊರಗೆ ಓಡಿಬಂದಿದ್ದಾರೆ.ಆ ವೇಳೆಗಾಗಲೇ ಚಿರತೆ ನಾಯಿ ಮೇಲೆ ದಾಳಿ ನಡೆಸಿ ಹೊತ್ತೊಯ್ದಿದೆ.ಕೆಲಸದಾಳು ನಾಯಿಯನ್ನು ರಕ್ಷಿಸಲೆಂದು ಪ್ರಯತ್ನ ಪಡುವುದಕ್ಕೆ ಚಡಪಡಿಸುವುದನ್ನು ದೃಶ್ಯಾವಳಿಗಳಲ್ಲಿ ಕಾಣಬಹುದಾಗಿದೆ.ಅಳವಡಿಸಲಾದ ಸಿಸಿ ಕ್ಯಾಮರಾದಲ್ಲೂ ಚಿರತೆಯ ಭಯಾನಕ ಕೃತ್ಯ ದಾಖಲಾಗಿದೆ.ಚಿರತೆ ಹಾವಳಿ ಇರುವುದರಿಂದ ದ್ವಿಚಕ್ರ ವಾಹನ ಸವಾರರು,ಸಾರ್ವಜನಿಕರು ಎಚ್ಚೆತ್ತುಕೊಳ್ಳುವಂತೆ ತಿಳಿಸಲಾಗಿದೆ.