ನ್ಯೂಸ್ ನಾಟೌಟ್: ಸೋಮವಾರ ಮಾರ್ಚ್ 13 ರಂದು ಬಿಹಾರದ ಜಮುಯಿ ಜಿಲ್ಲೆಯಲ್ಲಿ ದುಷ್ಕರ್ಮಿಯೊಬ್ಬ ಮಹಿಳೆಗೆ ಬಲವಂತವಾಗಿ ಚುಂಬಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂತ್ರಸ್ತೆಯನ್ನು ಆರೋಗ್ಯ ಕಾರ್ಯಕರ್ತೆ ಎಂದು ಗುರುತಿಸಲಾಗಿದ್ದು, ಅವರು ಪ್ರಸ್ತುತ 2015 ರಿಂದ ಜಮುಯಿಯಲ್ಲಿರುವ ಸದರ್ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದಾರೆ. ಶುಕ್ರವಾರ ಮಾರ್ಚ್ 10 ಹಗಲು ಆಸ್ಪತ್ರೆಯ ಆವರಣದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಅಪರಿಚಿತ ದುಷ್ಕರ್ಮಿಯೊಬ್ಬ ಆಸ್ಪತ್ರೆಯ ಗೋಡೆ ಹಾರಿ ಫೋನ್ನಲ್ಲಿ ಮಾತನಾಡುತ್ತಿದ್ದ ತನ್ನ ಗುರಿಯನ್ನು ಕಂಡುಕೊಂಡು, ಪರಿಸ್ಥಿತಿಯ ಲಾಭ ಪಡೆಯುವ ಭರದಲ್ಲಿ ಬಲವಂತವಾಗಿ ಹಿಡಿದು ಮುದ್ದಾಡಿದ್ದಾನೆ.
ಘಟನೆಯಿಂದ ಸಂತ್ರಸ್ತೆ ಆಘಾತಕ್ಕೊಳಗಾಗಿರುವುದು ವಿಡಿಯೋ ದೃಶ್ಯಾವಳಿಗಳಿಂದ ಸ್ಪಷ್ಟವಾಗಿದೆ. ಕೂಡಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಮಾತನಾಡಿದ ಮಹಿಳೆ, “ಅವನು ಆಸ್ಪತ್ರೆಯ ಆವರಣಕ್ಕೆ ಏಕೆ ಬಂದನೆಂದು ನನಗೆ ತಿಳಿದಿಲ್ಲ. ನನಗೆ ಆತನ ಪರಿಚಯವಿಲ್ಲ. ಅವನು ನನ್ನ ಮೇಲೆ ದಾಳಿ ಮಾಡಿದಾಗ, ನಾನು ವಿರೋಧಿಸಿ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆದಿದ್ದೇನೆ. ಆದರೆ, ಆ ವೇಳೆಗಾಗಲೇ ಆ ವ್ಯಕ್ತಿ ಪರಾರಿಯಾಗಿದ್ದ.. ಆಸ್ಪತ್ರೆಯ ಆವರಣ ಗೋಡೆ ತುಂಬಾ ಚಿಕ್ಕದಾಗಿದ್ದು, ಮುಳ್ಳುಬೇಲಿ ಹಾಕಿ ಆಸ್ಪತ್ರೆ ಸಿಬ್ಬಂದಿಗಳಿಗೆ ರಕ್ಷಣೆ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ.” ಎಂದರು.
ಸಂತ್ರಸ್ತೆ ಜಮುಯಿ ಪೊಲೀಸರಿಗೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿ ಪೊಲೀಸರ ವಶದಲ್ಲಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.