ನ್ಯೂಸ್ ನಾಟೌಟ್: ಇತ್ತೀಚೆಗೆ ವಿಮಾನದಲ್ಲಿ ನೀತಿ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಈಗ ಅಂತಹದ್ದೆ ಮತ್ತೊಂದು ಘಟನೆ ಲಂಟನ್ ನಿಂದ ಮುಂಬೈಗೆ ಬರುತ್ತಿದ್ದ ವಿಮಾನದಲ್ಲಿ ಘಟಿಸಿದೆ.
ಹೌದು.. 37 ವರ್ಷದ ವ್ಯಕ್ತಿಯೊಬ್ಬ ಲಂಡನ್ನಿಂದ ಮುಂಬೈಗೆ ಹೊರಟಿದ್ದ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿರುವ ಘಟನೆ ಶುಕ್ರವಾರ ಮಾರ್ಚ್ ೧೦ರಂದು ನಡೆದಿದೆ. ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿರುವ ವ್ಯಕ್ತಿಯನ್ನು ರತ್ನಾಕರ್ ಕರುಂಕಂತ್ ದ್ವಿವೇದಿ ಎಂದು ಗುರುತಿಸಲಾಗಿದೆ.
ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಲ್ಲದೆ, ಸಹ ಪ್ರಯಾಣಿಕರು ಮತ್ತು ಸಿಬ್ಬಂದಿ ಜತೆಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತ ಮಾತು ಕೇಳದಿದ್ದಾಗ ಸಹ ಪ್ರಯಾಣಿಕರೆಲ್ಲಾ ಸೇರಿ ಆತನ ಕೈಕಾಲು ಕಟ್ಟಿ ಕೂರಿಸಿದ್ದರು ಎಂದು ತಿಳಿದುಬಂದಿದೆ. ಸಹ ಪ್ರಯಾಣಿಕರೆಲ್ಲಾ ಸೇರಿ ಆತನ ಕೈಕಾಲು ಕಟ್ಟಿ ಕೂರಿಸಿದ್ದಾಗಲೂ ಆತ ನಿಲ್ಲದೆ ತಲೆ ಚಚ್ಚಿಕೊಳ್ಳಲು ಶುರು ಮಾಡಿದ್ದ, ತಕ್ಷಣ ಅಲ್ಲಿಯೇ ಇದ್ದ ವೈದ್ಯರೊಬ್ಬರು ಆತನ ಬ್ಯಾಗ್ನಲ್ಲಿ ಏನಾದರೂ ಔಷಧಿ ಇದೆಯೇ ಎಂಬುದನ್ನು ಪತ್ತೆ ಮಾಡಲು ಹೇಳಿದರು, ಆದರೆ ಬ್ಯಾಗ್ನಲ್ಲಿ ಕೇವಲ ಸಿಗರೇಟ್ ಮಾತ್ರ ಕಂಡುಬಂದಿತ್ತು. ಆರೋಪಿಯು ಭಾರತ ಮೂಲದ ಅಮೆರಿಕನ್ ಪ್ರಜೆ ಎಂದು ವರದಿಯಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಸದ್ಯ ರತ್ನಾಕರ್ ಕರುಂಕಂತ್ ದ್ವಿವೇದಿಯ ವೈದ್ಯಕೀಯ ಪರೀಕ್ಷೆಗೆ ಸ್ಯಾಂಪಲ್ ಕಳುಹಿಸಲಾಗಿದ್ದು, ಆ ವೇಳೆ ಆತ ಕುಡಿದ ಅಮಲಿನಲ್ಲಿದ್ದನೋ ಅಥವಾ ಮಾನಸಿಕ ಅಸ್ವಸ್ಥನಾಗಿದ್ದನೋ ಎಂಬುದು ತನಿಖೆಯ ಬಳಿಕವಷ್ಟೇ ಗೊತ್ತಾಗಲಿದೆ.