ನ್ಯೂಸ್ ನಾಟೌಟ್: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ.ಇದಕ್ಕಾಗಿ ರಾಜ್ಯ ಸಜ್ಜಾ ಗಿದೆ. ಇದೀಗ 80 ವರ್ಷ ಮೇಲ್ಪಟ್ಟವರಿಗೆ ದೇಶದಲ್ಲೇ ಮೊದಲ ಬಾರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ರಾಜ್ಯದ ಮತದಾರರಿಗೆ ಲಭಿಸಲಿದೆ.
ಈ ಕುರಿತು ಸ್ವತಃ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರುಹದಿನಾರನೇ ವಿಧಾನಸಭೆಯನ್ನು ಪ್ರತಿಷ್ಠಾಪಿಸುವ ಎಲ್ಲ ಪ್ರಕ್ರಿಯೆಗಳನ್ನು ಮೇ 24 ರೊಳಗಾಗಿ ಪೂರ್ಣಗೊಳಿಸಲಾಗುವುದು ಎಂದಿದ್ದಾರೆ. ಮೂರು ದಿನಗಳಿಂದ ರಾಜ್ಯದಲ್ಲಿ ಬೀಡುಬಿಟ್ಟು ಪೂರ್ವ ತಯಾರಿಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗದ ತಂಡವು ಚುನಾವಣಾ ಸಿದ್ಧತೆ, ಸಿಬ್ಬಂದಿ, ಮತಗಟ್ಟೆ, ಮತದಾರರು ಹಾಗೂ ಮತದಾನಕ್ಕೆ ಕಲ್ಪಿಸಲಾಗುವ ಸೌಲಭ್ಯಗಳ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿತು.
ಮತದಾನದಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ಮಾಡಲಾಗಿದೆ. 80 ವರ್ಷಕ್ಕೂ ಹೆಚ್ಚು ವಯಸ್ಸಿನವರಿಗೆ ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದಿದ್ದಾರೆ.ಮತದಾನ ಕೇಂದ್ರಕ್ಕೆ ಬರಲಾಗದೆ ಮನೆಯಲ್ಲೇ ಮತದಾನ ಬಯಸುವವರಿಗೆ ಆಯೋಗ ಈ ಸೌಲಭ್ಯ ಕಲ್ಪಿಸಿದೆ. ಮತದಾನ ಕೇಂದ್ರಗಳಲ್ಲಿ ಇವರಿಗೆ ವಿಶೇಷ ಸೌಲಭ್ಯ ಕೂಡ ಒದಗಿಸುತ್ತಿದ್ದು,ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ 12,15763 ಮಂದಿ ಮತದಾರರು ಇದರ ಪ್ರಯೋಜನ ಪಡೆದುಕೊಳ್ಳಬಹುದು. 16,976 ಮಂದಿ 100 ವರ್ಷ ಮೇಲ್ಪಟ್ಟವರಿದ್ದು, 5.55 ಲಕ್ಷ ಅಂಗವಿಕಲರಿದ್ದಾರೆ. ಈ ಪೈಕಿ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು, ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪಾರದರ್ಶಕವಾಗಿ ಗೌಪ್ಯ ಮತದಾನ ಪ್ರಕ್ರಿಯೆ ನಡೆಸಲಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.