ನ್ಯೂಸ್ ನಾಟೌಟ್ : ಇಂಡೋನೇಷ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲೊಂದಾದ “ಮೆರಾಪಿ” ಜ್ವಾಲಾಮುಖಿ ಶನಿವಾರ ಮಾರ್ಚ್ 11ರಂದು ಮಧ್ಯಾಹ್ನ ಸ್ಫೋಟಗೊಂಡಿದೆ. ವರದಿಗಳ ಪ್ರಕಾರ ಜ್ವಾಲಾಮುಖಿ ಸ್ಫೋಟಗೊಂಡ ಬಳಿಕ ಬಿಸಿ ಮೋಡವು ಏಳು ಕಿಲೋಮೀಟರ್ ವರೆಗೆ ವ್ಯಾಪಿಸಿದೆ ಎನ್ನಲಾಗಿದೆ.
ಮೆರಾಪಿ ಜ್ವಾಲಾಮುಖಿ ಇಂಡೋನೇಷ್ಯಾದ ಯೋಗಕರ್ತಾ ಎಂಬ ಪ್ರದೇಶದಲ್ಲಿದೆ. ಜ್ವಾಲಾಮುಖಿ ಇಂಡೋನೇಷ್ಯಾದ ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12 ಗಂಟೆಗೆ ಸ್ಫೋಟಿಸಿತು ಮತ್ತು 1.5 ಕಿಮೀ ಲಾವಾದ ಜ್ವಾಲೆಯ ಹರಿವು ಕಂಡುಬಂದಿದೆ ಎಂದು ವರದಿ ತಿಳಿಸಿದೆ.
2,963 ಮೀಟರ್ ಎತ್ತರದ (9,721 ಅಡಿ) ಮೆರಾಪಿ ಇಂಡೋನೇಷ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಈಗಾಗಲೇ ಆ ದೇಶದ ಎರಡನೇ ಅತಿ ಹೆಚ್ಚು ಅಪಾಯಕಾರಿ ಮಟ್ಟದಲ್ಲಿರುವ ಬಗ್ಗೆ ವಿಜ್ಞಾನಿಗಳ ವರದಿ ತಿಳಿಸಿದೆ.
ಆ ಪರ್ವತದಿಂದ 3 ರಿಂದ 7 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಅಪಾಯದ ವಲಯದಲ್ಲಿರುವ ನಿವಾಸಿಗಳಿಗೆ ಯಾವುದೇ ಪರಿಸರ ವಿರೋಧಿ ಚಟುವಟಿಕೆಗಳನ್ನು ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಆದರೆ ಯಾವುದೇ ನಿವಾಸಿಗಳನ್ನು ಸ್ಥಳಾಂತರಿಸಲಾಗಿಲ್ಲ ಎಂದು ಅಲ್ಲಿನ ಸ್ಥಳೀಯ ಆಡಳಿತ ತಿಳಿಸಿದೆ.
ಜ್ವಾಲಾಮುಖಿಯ ವ್ಯಾಪ್ತಿ ಹೆಚ್ಚುತ್ತಲೇ ಇದ್ದರೆ ಮತ್ತು 7 ಕಿಲೋಮೀಟರ್ಗಳಿಗಿಂತ ಹೆಚ್ಚು ದೂರ ವ್ಯಾಪಿಸಿದರೆ ನಿವಾಸಿಗಳನ್ನು ಸ್ಥಳಾಂತರಿಸಲು ಶಿಫಾರಸು ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಮೆರಾಪಿ ಕೊನೆಯದಾಗಿ 2010 ರಲ್ಲಿ ಹಿಂಸಾತ್ಮಕವಾಗಿ ಸ್ಫೋಟಿಸಿತು, 350 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು.