ಸಕಲೇಶಪುರ: ಆಧುನಿಕ ದಿನಗಳಲ್ಲಿ ಪ್ರೀತಿ-ಪ್ರೇಮದ ಸ್ವರೂಪವೇ ಬದಲಾಗಿ ಹೋಗಿದೆ. ಇದಕ್ಕೊಂದು ತಾಜಾ ಉಧಾಹರಣೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿರುವ ವಿಚಿತ್ರ ಪ್ರೇಮ ಪ್ರಕರಣ. ಈ ಪ್ರೇಮ ಪ್ರಕರಣದ ಕಥೆಯನ್ನು ಓದುವಾಗ ಎಂತಹವರಿಗೂ ನಗು ತರಿಸುತ್ತದೆ. ಗ್ರಾಮದ ಯುವಕನೊಬ್ಬ ಏಕಕಾಲದಲ್ಲಿ ಇಬ್ಬರು ಹುಡುಗಿಯರನ್ನು ಪ್ರೀತಿಸಿದ್ದಾನೆ. ಆದರೆ ಒಬ್ಬಳನ್ನು ಪ್ರೀತಿಸುವುದು ಇನ್ನೊಬ್ಬಳಿಗೆ ಗೊತ್ತಾಗದಂತೆ ಗೌಪ್ಯತೆ ಕಾಪಾಡಿಕೊಂಡಿದ್ದ. ಆನಂತರ ಪ್ರೀತಿ ವಿಷಯ ಎಲ್ಲರಿಗೂ ತಿಳಿದಿದ್ದು ಮುಂದೆನಾಯ್ತು ಅನ್ನೋದೇ ಈ ಸ್ಟೋರಿಯ ತಿರುವಾಗಿದೆ.
ತ್ರಿಕೋನ ಪ್ರೇಮ ಕಥೆ-ವ್ಯಥೆ
ಸಕಲೇಶಪುರ ಮೂಲದ ಯುವಕನೊಬ್ಬ ಇಬ್ಬರು ಯುವತಿಯರನ್ನು ಪ್ರೀತಿಸಿದ್ದನಂತೆ. ಆದರೆ ಯುವಕ ಇಬ್ಬರನ್ನು ಪ್ರೀತಿಸಿರುವ ವಿಷಯ ಯುವತಿಯರಿಗೆ ತಿಳಿದಿರಲಿಲ್ಲ. ಆದರೆ ಇಬ್ಬರು ಯುವತಿಯರು ಏಕಕಾಲದಲ್ಲಿ ತಮ್ಮನ್ನು ಮದುವೆಯಾಗುವಂತೆ ಯುವಕನ ಬಳಿ ಜಗಳ ಮಾಡಿದಾಗ, ತ್ರಿಕೋನ ಪ್ರೇಮ ಕಥೆ ಬಯಲಾಗಿದೆ. ಇಬ್ಬರೂ ಯುವತಿಯರು ತನ್ನನ್ನೇ ಮದುವೆಯಾಗುವಂತೆ ಪಟ್ಟು ಹಿಡಿದಿದ್ದರಿಂದ ಪರಿಚಯಸ್ಥರು ರಾಜಿ, ಪಂಚಾಯ್ತಿ ಮಾಡಲು ಮುಂದಾದರೂ ಫಲಕಾರಿಯಾಗಿಲ್ಲ. ಇಬ್ಬರಲ್ಲಿ ಒಬ್ಬಳು ಯುವತಿ ವಿಷ ಸೇವಿಸಿ ಅದೃಷ್ಟವಶಾತ್ ಬದುಕಿ ಬಂದಿದ್ದಾಳೆ.
ಚೀಟಿ ಹಾಕಿ ಯುವತಿ ಆರಿಸಿದ ಊರವರು
ಇಷ್ಟೆಲ್ಲ ಅವಾಂತರದ ನಂತರ ಇಬ್ಬರ ಹೆಸರನ್ನೂ ಚೀಟಿಯಲ್ಲಿ ಬರೆದು ಹಾಕುತ್ತೇವೆ. ಯಾರ ಹೆಸರು ಬರುತ್ತದೋ ಆ ಹುಡುಗಿಯನ್ನು ಯುವಕ ವರಿಸುತ್ತಾನೆ ಎಂದು ಪರಿಚಯಸ್ಥರು, ಸಂಬಂಧಿಕರು ತೀರ್ಮಾನ ಮಾಡಿದ್ದಾರೆ. ಈ ವೇಳೆ ಒಂದು ನಿರ್ಧಾರಕ್ಕೆ ಬಂದ ಯುವಕ, ತನಗಾಗಿ ವಿಷ ಸೇವಿಸಿ ಬದುಕಿ ಬಂದ ಯುವತಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾನೆ. ಇದ್ರಿಂದ ಕೋಪಗೊಂಡ ಮತ್ತೊಬ್ಬಳು ಯುವತಿ ಯುವಕನ ಕೆನ್ನೆಗೆ ಬಾರಿಸಿದ್ದಾಳೆ. ನಂತರ ಯುವಕ ಮದುವೆಯಾಗಲು ನಿರ್ಧರಿಸಿದ ಯುವತಿ ಬಳಿ ಬಂದು, ನನಗೆ ನಿನ್ನ ಮೇಲೆ ಕೋಪವಿಲ್ಲ. ಮನಸ್ಸಲ್ಲಿ ಏನೂ ಇಟ್ಕೋಬೇಡ. ಎಲ್ಲಿಯಾದರೂ ಸಿಕ್ಕಾಗ ಮಾತನಾಡಿಸು. ನಿನ್ನ ಬದುಕು ಚೆನ್ನಾಗಿರಲಿ. ಆದರೆ ನನಗೆ ಮೋಸ ಮಾಡಿದವನನ್ನು ಮಾತ್ರ ಸುಮ್ಮನೆ ಬಿಡಲ್ಲ ಎಂದು ಹೊರಟು ಹೋಗಿದ್ದಾಳೆ.
ಸದ್ಯ ಘಟನೆ ಸಂಬಂಧ ಎಲ್ಲಿಯೂ ದೂರು ದಾಖಲಾಗಿಲ್ಲ. ಆದರೆ ಹಲವು ದಿನಗಳಿಂದ ಬಿಡಿಸಲಾಗದೆ ಕಗ್ಗಂಟಾಗಿದ್ದ ಪ್ರೇಮ ಪುರಾಣ ಕೊನೆಗೆ ಒಬ್ಬಳನ್ನು ಮದುವೆಯಾಗುವುದರೊಂದಿಗೆ ಸುಖಾಂತ್ಯ ಕಂಡಿದೆ. ಆದರೆ ತನಗೆ ಮೋಸ ಮಾಡಿದ ಯುವಕನಿಗೆ ಎಚ್ಚರಿಕೆ ನೀಡಿರುವ ಯುವತಿಯ ನಡೆ ಮಾತ್ರ ಆತಂಕಕ್ಕೆ ಕಾರಣವಾಗಿದೆ.