ನ್ಯೂಸ್ ನಾಟೌಟ್: ರಾಜ್ಯ ಪಠ್ಯಕ್ರಮದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ನಿರ್ಧಾರ ಪ್ರಶ್ನಿಸಿರುವ ಪ್ರಕರಣದ ತೀರ್ಪನ್ನು ಹೈಕೋರ್ಟ್ ಗುರುವಾರ ಕಾಯ್ದಿರಿಸಿರುವ ಬೆನ್ನಲ್ಲೇ ಶಿಕ್ಷಣ ಇಲಾಖೆ ಆಯಾ ಶಾಲೆಗಳನ್ನೇ ಪರೀಕ್ಷಾ ಕೇಂದ್ರಗಳನ್ನಾಗಿ ಮಾರ್ಪಡಿಸಿ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.
ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸಲು 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಂಡಳಿ (ಬೋರ್ಡ್) ಪರೀಕ್ಷೆ ನಡೆಸಲು ನಿರ್ಧರಿಸಿ ವೇಳಾಪಟ್ಟಿಯನ್ನೂ ಪ್ರಕಟಿಸಿದೆ.
ಮಕ್ಕಳ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಉದ್ದೇಶದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಮಕ್ಕಳನ್ನು ಮುಂದಿನ ತರಗತಿಗೆ ಕಳಿಸಲಾಗುವುದು ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ಸರ್ಕಾರ ಕೈಗೊಂಡಿರುವ ಕ್ರಮ ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ಸಿಂಗ್ ಯೆರೂರ್ ಅವರ ನ್ಯಾಯಪೀಠದ ಮುಂದೆ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.
ಮಾ.13ರಿಂದ 18ರವರೆಗೆ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಪರೀಕ್ಷಾ ಕೇಂದ್ರಗಳನ್ನು ರಚಿಸುವಂತೆ ಸೂಚಿಸಲಾಗಿತ್ತು. ಅಂದರೆ, ಯಾವುದೇ ಶಾಲೆಯಲ್ಲಿ ಕಡಿಮೆ ಮಕ್ಕಳಿದ್ದರೆ ಅವರಿಗೆ ಸಮೀಪದ ಮತ್ತೊಂದು ಶಾಲೆಯನ್ನು ಪರೀಕ್ಷಾ ಕೇಂದ್ರವಾಗಿಸಲು ಸೂಚಿಸಲಾಗಿತ್ತು. ಆದರೆ, ಇದಕ್ಕೆ ಪೋಷಕರಿಂದ ಆಕ್ಷೇಪಗಳು ವ್ಯಕ್ತವಾಗಿವೆ. ಹಾಗಾಗಿ ಆಯಾ ಶಾಲೆಗಳನ್ನೇ ಕೇಂದ್ರವಾಗಿಸಲು ಇಲಾಖೆ ಸೂಚಿಸಿದೆ.
ಮಾ.3 ರಿಂದಲೇ ಆರಂಭಿಸಿರುವ ಇಲಾಖೆಯ ಸಹಾಯವಾಣಿಗೆ ಕರೆ ಮಾಡುತ್ತಿರುವ ಪೋಷಕರು, ವಿದ್ಯಾರ್ಥಿಗಳು ಪ್ರಸ್ತುತ ಶಾಲೆಯಿಂದ ಪರೀಕ್ಷೆ ಕೇಂದ್ರಗಳಿಗೆ ತೆರಳಲು ಅನಾನುಕೂಲವಾಗುತ್ತಿರುವ ಬಗ್ಗೆ ಆಕ್ಷೇಪಣೆಗಳನ್ನು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಶಾಲೆಗಳನ್ನೇ ಪರೀಕ್ಷಾ ಕೇಂದ್ರಗಳನ್ನಾಗಿ ಪರಿಗಣಿಸಿ ಈಗಾಗಲೇ ನಿಗದಿ ಮಾಡಿರುವ ದಿನಾಂಕಗಳಂದೇ ಮೌಲ್ಯಾಂಕನವನ್ನು ನಡೆಸಬೇಕು. ಉಳಿದಂತೆ ಮಾರ್ಗಸೂಚಿ ಅನ್ವಯ ಗೌಪ್ಯತೆ ಮತ್ತು ಪಾವಿತ್ರ್ಯತೆ ಕಾಪಾಡುವಂತೆ ಕರ್ನಾಟಕ ಶಾಲಾ ಗುಣಮಟ್ಟಮತ್ತು ಅಂಗೀಕರಣ ಪರಿಷತ್ತು ತಿಳಿಸಿದೆ.