ನ್ಯೂಸ್ ನಾಟೌಟ್: ಕೊರೊನಾ ಬಳಿಕ ರಾಜ್ಯದಲ್ಲಿ ಹೆಚ್3ಎನ್2 ವೈರಸ್ ಆತಂಕ ಮೂಡಿಸಿದ್ದು, ಇದೀಗ ಈ ಸೋಂಕಿಗೆ ಕರ್ನಾಟಕದಲ್ಲಿ ಮೊದಲ ಸಾವು ಸಂಭವಿಸಿರುವುದಾಗಿ ವರದಿಯಾಗಿದೆ.
ಹೆಚ್3ಎನ್2 ವೈರಸ್ನಿಂದ ಬಳಲುತ್ತಿದ್ದ ಹಾಸನ ಮೂಲದ ವೃದ್ಧ ಮೃತಪಟ್ಟಿದ್ದಾರೆ. ವಿಪರೀತ ಜ್ವರ, ಚಳಿ, ಗಂಟಲು ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ವೃದ್ಧ ಮೃತಪಟ್ಟಿದ್ದು, ಈಗಾಗಲೇ ರಾಜ್ಯದ ಜಿಲ್ಲೆಗಳಲ್ಲಿ ಹೆಚ್3ಎನ್2 ವೈರಸ್ ಹೆಚ್ಚಾಗಿದೆ. ರಾಜ್ಯದಲ್ಲಿ ಸುಮಾರು 50ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿದ್ದು, ಹಾಸನದಲ್ಲಿ ಆರು ಜನರಿಗೆ ಹೆಚ್3ಎನ್2 ವೈರಸ್ ತಗುಲಿರುವುರು ದೃಢಪಟ್ಟಿದೆ.
ಡಯಾಬಿಟೀಸ್ ಮುಂತಾದ ಕಾಯಿಲೆಗಳು ಹಾಗೂ 60 ವರ್ಷ ಮೇಲ್ಪಟ್ಟವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಜ್ವರ ಕಾಣಿಸಿಕೊಂಡವರು ಸ್ವಯಂ ಚಿಕಿತ್ಸೆ ತೆಗೆದುಕೊಳ್ಳದೇ ವೈದ್ಯರ ಭೇಟಿ ಮಾಡಲು ಸೂಚಿಸಲಾಗಿದೆ. ಈ ಮೊದಲ ಸಾವಿನ ಬಗ್ಗೆ ತನಿಖೆಗೆ ಆರೋಗ್ಯ ಇಲಾಖೆ ಮುಂದಾಗಿದ್ದು, ಯಾರು ಜ್ವರ ಬಂದಾಗ ಮನೆಯಲ್ಲಿಯೇ ಔಷಧಿ ತೆಗೆದುಕೊಳ್ಳದೇ ವೈದ್ಯರನ್ನು ಸಂಪರ್ಕಿಸಲು ಆಯುಕ್ತ ರಂದೀಪ್ ಸಲಹೆ ನೀಡಿದ್ದಾರೆ.
ಮುನ್ನೆಚ್ಚರಿಕೆ ಕ್ರಮಾವಾಗಿ ಮೃತ ವ್ಯಕ್ತಿಯ ಗ್ರಾಮದ ಸುತ್ತಮುತ್ತಲ ಹಳ್ಳಿಯಲ್ಲಿ ಅರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಅನಾರೋಗ್ಯ ಪೀಡಿತ ಜನರನ್ನು ವೈದ್ಯರ ತಂಡ ತಪಾಸಣೆ ಮಾಡುತ್ತಿದೆ. ಎಲ್ಲರ ಅರೋಗ್ಯ ತಪಾಸಣೆ ನಡೆಸಿ ಪರೀಕ್ಷೆಗಾಗಿ ಗಂಟಲು ದೃವವನ್ನು ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಚ್3ಎನ್2 ವೈರಸ್ನಿಂದ ಹರಡಿರುವ ಸೋಂಕು ಕನಿಷ್ಠ 5ರಿಂದ 7 ದಿನಗಳ ವರೆಗೆ ಇರುತ್ತದೆ. ಗರ್ಭಿಣಿಯರು, ಮಕ್ಕಳು, ವೃದ್ಧರಿಗೆ ಬೇಗ ಸೋಂಕು ಹರಡುತ್ತದೆ. 15 ವರ್ಷದಿಂದ 65 ವರ್ಷದವರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ವಯೋಮಾನದವರು ಹಾಗೂ ಎಲ್ಲರೂ ಬಹಳ ಎಚ್ಚರಿಕೆ ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.