ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ (ಮಾ. 9) ಬೆಳಗ್ಗೆ 9ರಿಂದ 11ರ ವರೆಗೆ ಎರಡು ಗಂಟೆ ಸ್ವಯಂಪ್ರೇರಿತ ಬಂದ್ಗೆ ಕರೆ ನೀಡಲಾಗಿದೆ.
ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರ ಹಗರಣಗಳನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ನ ನಿರ್ಧಾರದಂತೆ ಬಂದ್ಗೆ ಕರೆ ನೀಡಲಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ತಿಳಿಸಿದ್ದಾರೆ.
ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದೆಂಬ ಉದ್ದೇಶದಿಂದ ಬಲವಂತದ ಬಂದ್ ಮಾಡುವುದಿಲ್ಲ. ಬಸ್ ಬಂದ್ ಮಾಡುವುದಿಲ್ಲ. ಅಂಗಡಿ, ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ವಾಗಿ ಮುಚ್ಚುವಂತೆ ಕರೆ ನೀಡಿದ್ದೇವೆ. ನಗರದಲ್ಲಿರುವ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸ ಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಬಿಜೆಪಿ ಸರ್ಕಾರದ ಶೇ.40 ಕಮಿಷನ್ ದೇಶದಾದ್ಯಂತ ಸದ್ದು ಮಾಡುತ್ತಿದೆ. ಆದರೆ ಮುಖ್ಯಮಂತ್ರಿಯವರು ಪುರಾವೆ ಕೇಳುತ್ತಿದ್ದಾರೆ. ತನಿಖಾಧಿಕಾರಿಗಳನ್ನು ನೇಮಿಸಿದರೆ ಅವರಿಗೆ ಪುರಾವೆ ಕೊಡಬಹುದು. ಪಿಎಸ್ಐ, ಅಧ್ಯಾಪಕರು, ಮೆಸ್ಕಾಂ ಅಧಿಕಾರಿಗಳು, ವೈಸ್ ಚಾನ್ಸಲರ್ ನೇಮಕದಲ್ಲಿ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ಮಾಡಾಳು ವಿರೂಪಾಕ್ಷ ಅವರ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ನಾಲ್ಕು ವರ್ಷಗಳಲ್ಲಿ ರಾಜ್ಯದ ಸಾಲ ದ್ವಿಗುಣವಾಗಿದೆ. ಬಿಜೆಪಿಗೆ ಮುಂದೆ ವಿಜಯೋತ್ಸವ ಮಾಡುವ ಅವಕಾಶ ಇಲ್ಲ. ಹಾಗಾಗಿ ವಿಜಯಸಂಕಲ್ಪ ಯಾತ್ರೆ ಮಾಡುತ್ತಿದೆ. ಬಿಜೆಪಿಯವರಿಗೆ ಇನ್ನು ಎರಡು ತಿಂಗಳ ಅವಕಾಶವಿದೆ. ಧಮ್ ಇದ್ದರೆ ಸಿದ್ಧರಾಮಯ್ಯ ಅವರ ವಿರುದ್ಧ ತನಿಖೆ ನಡೆಸಲಿ ಎಂದು ಹರೀಶ್ ಕುಮಾರ್ ಹೇಳಿದರು.