ಸುಳ್ಯ: ಸಂಘಟನೆ ಬೆಳೆದಂತೆ, ಕಾರ್ಯಕರ್ತರ ಪಡೆ ವಿಸ್ತಾರವಾದಂತೆ ನಾಯಕತ್ವ ವಹಿಸುವವರು ಹೆಚ್ಚಾಗುತ್ತಾರೆ. ಇದರಿಂದ ಸಹಜವಾಗಿ ಸಣ್ಣ ಪುಟ್ಟ ಮನಸ್ತಾಪಗಳು ಬರುತ್ತವೆ. ಕಳೆದ ಎರಡು ವರ್ಷಗಳಿಂದ ಬಿಜೆಪಿಯಲ್ಲಿನ ಭಿನ್ನಮತವನ್ನು ಪಕ್ಷದ ಪ್ರಮುಖರ ಸಮ್ಮುಖದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇತ್ಯರ್ಥಪಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಹೇಳಿದರು.
ಸುಳ್ಯ ಬಿ.ಜೆ.ಪಿ. ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿಯಲ್ಲಿ ನಾವೆಲ್ಲರೂ ಒಂದೇ ಕುಟುಂಬ ಸದಸ್ಯರಂತೆ ಬಾಳುತ್ತಿದ್ದೇವೆ. ಒಂದು ಕುಟುಂಬದಲ್ಲಿ ಮನಸ್ತಾಪಗಳು ಬರುವಾಗ ಕುಟುಂಬದ ಹಿರಿಯರು ಸಂಧಾನ ನಡೆಸುವಂತೆ ನಾವು ಸಂಧಾನ ನಡೆಸಿದ್ದೇವೆ ಎಂದರು.
ಎಸ್.ಎನ್.ಮನ್ಮಥರಿಂದ ಒಗ್ಗಟ್ಟಿನ ಮಂತ್ರ
ಈ ಹಿಂದೆ ಕೆಲ ಘಟನೆಗಳಿಂದ ಪಕ್ಷಕ್ಕಾದ ತೊಡಕಿನ ಕುರಿತು ವಿಷಾದವಿದೆ. ಮುಂದಿನ ದಿನಗಳಲ್ಲಿ ನಾವು ಪಕ್ಷ ಹೇಳಿದಂತೆ ಕಾರ್ಯನಿರ್ವಹಿಸುತ್ತೇವೆ. ಪಕ್ಷ ನೀಡುವ ಜವಬ್ದಾರಿಯನ್ನೂ ನಿರ್ವಹಿಸುತ್ತೇವೆ. ನಾವೆಲ್ಲರೂ ಒಗ್ಗಟ್ಟಿನಿಂದ ಇರುತ್ತೇವೆ ಎಂದು ಎಸ್.ಎನ್.ಮನ್ಮಥ ಹೇಳಿದರು.
ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಂಡಲ ಸಮಿತಿ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಎವಿ ತೀರ್ಥರಾಮ, ಪ್ರಮುಖರಾದ ವೆಂಕಟ್ ವಳಲಂಬೆ, ಸುಬೋದ್ ಶೆಟ್ಟಿ ಮೇನಾಲ, ಎನ್.ಎ.ರಾಮಚಂದ್ರ, ಕೇಶವ ಭಟ್ ಮುಳಿಯ ಉಪಸ್ಥಿತರಿದ್ದರು.