ನ್ಯೂಸ್ ನಾಟೌಟ್ : ಇತಿಹಾಸ ಪ್ರಸಿದ್ದ ಕೊಕ್ಕಡದ ಸೌತಡ್ಕ ದೇವಸ್ಥಾನ ಬಳಿ ಹಾಕಿರುವ ಬ್ಯಾನರ್ ಒಂದು ವಿವಾದಕ್ಕೆ ಕಾರಣವಾಗಿದೆ.ಇದೀಗ ಈ ಬ್ಯಾನರ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪರ-ವಿರೋಧದ ಚರ್ಚೆಗಳು ಕೇಳಿ ಬರುತ್ತಿವೆ.
ಕೊಕ್ಕಡ ಮತ್ತು ಧರ್ಮಸ್ಥಳ ಮಾರ್ಗವಾಗಿ ದೇವಾಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಹಿಂದೂಯೇತರರ ಆಟೋ, ಟ್ಯಾಕ್ಸಿ ಇನ್ನಿತರ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಿ ಬ್ಯಾನರ್ ಅಳವಡಿಸಲಾಗಿದ್ದು,ಬ್ಯಾನರ್ ನಲ್ಲಿ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಕೊಕ್ಕಡ ಪ್ರಕಟಣೆ ಎಂದು ಬರೆಯಲಾಗಿದೆ.
‘ಹಿಂದೂ ಶ್ರದ್ಧಾ ಕೇಂದ್ರವಾದ ನಮ್ಮ ಊರಿನ ಪುಣ್ಯ ಕ್ಷೇತ್ರ ಸೌತಡ್ಕದಲ್ಲಿ ಅನ್ಯಕೋಮಿನವರು ಪ್ರವೇಶ ಮಾಡಿ ಭಕ್ತಾದಿಗಳನ್ನು ಲವ್ ಜಿಹಾದ್ ಹಾಗೂ ದುಷ್ಕೃತ್ಯ ನಡೆಸಿರುವುದು ಕಂಡು ಬಂದಿರುವುದರಿಂದ ಹಿಂದೂಯೇತರರ, ಆಟೋ ಮತ್ತು ಟ್ಯಾಕ್ಸಿ ಇನ್ನಿತರ ಯಾವುದೇ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ’ ಎಂದು ಬರೆಯಲಾಗಿದೆ.ಸದ್ಯ ಈ ಬ್ಯಾನರ್ ಸಾಕಷ್ಟು ಚರ್ಚೆಗೂ ಕಾರಣವಾಗಿದೆ.ನಂಬುವ ಭಕ್ತರಿಗೆ ಇಂಬು ನೀಡುವ ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ದಿನವೊಂದಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಶ್ರೀ ಮಹಾಗಣಪತಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.ದೇವಾಲಯದ ಸುತ್ತ ಮುತ್ತ ಹಲವಾರು ಮನೆಗಳೂ ಇವೆ. ಜನರು ಬೇರೆ ಬೇರೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಪ್ರದೇಶಕ್ಕೆ ಆಗಮಿಸುವವರು ಇದ್ದಾರೆ.ಹೀಗಾಗಿ ಬ್ಯಾನರ್ ಬಗ್ಗೆ ನೆಟ್ಟಿಗರು ಪರ-ವಿರೋಧದ ಕಾಮೆಂಟ್ ಮಾಡುತ್ತಿದ್ದಾರೆ.