ನ್ಯೂಸ್ ನಾಟೌಟ್: ತುಂಬಾ ಜನರಿಗೆ ನಾಯಿ ಮರಿಯನ್ನು ಕಂಡ್ರೆ ಇಷ್ಟ.ಕೆಲವರು ಮನೆ ಕಾಯೋದಕ್ಕೆ ನಾಯಿಯನ್ನು ಸಾಕಿದ್ರೆ ಇನ್ನೂ ಕೆಲವರು ಇಷ್ಟ ಪಟ್ಟು ಸಾಕುವವರು ಇದ್ದಾರೆ.ಇಲ್ಲೊಬ್ಬಳು ಮಹಿಳೆ ನಾಯಿ ಮರಿಯನ್ನು ಮನೆಗೆ ತಂದು ಸಾಕುವುದಕ್ಕೆ ಶುರು ಮಾಡಿದ್ದಾಳೆ.ಆದ್ರೆ ಎರಡು ವರ್ಷ ಕಳೆಯುತ್ತಿದ್ದಂತೆ ಭಯಾನಕ ಸತ್ಯ ಆಕೆಯನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತೆ..
ಹೌದು, ಚೀನಾದ ಗ್ರಾಮೀಣ ಪ್ರದೇಶದ ಕುಟುಂಬವೊಂದು ನಾಯಿ ಮರಿಯೊಂದನ್ನು ದತ್ತು ತೆಗೆದುಕೊಂಡು ಸಾಕುವುದಕ್ಕೆ ಶುರು ಮಾಡಿದೆ. ಚೆನ್ನಾಗಿ ಆರೈಕೆಯನ್ನು ಮಾಡಿದ್ದರು. ಸಾಮಾನ್ಯ ನಾಯಿಯ ರೀತಿ ಎರಡು ವರ್ಷ ಸಾಕಿದ್ದ ಅವರು ಸತ್ಯ ತಿಳಿದ ಬಳಿಕ ಕಂಗಾಲಾಗಿದ್ದಾರೆ. ಎರಡು ವರ್ಷ ಸಾಕಿದ ಬಳಿಕ ಅದು ನಾಯಿಯಲ್ಲ ಕರಡಿಯೆಂಬ ಸತ್ಯ ಅರಿವಾಗಿದೆ.
ಚೀನಾದ ಯುನ್ನಾನ್ ಪ್ರಾಂತ್ಯದ ಕುನ್ಮಿಂಗ್ ನಗರದ ಹೊರಗಿನ ದೂರದ ಹಳ್ಳಿಯ ಮಹಿಳೆ ಸುಯುನ್, 2016 ರಲ್ಲಿ ಟಿಬೆಟಿಯನ್ ಮಾಸ್ಟಿಫ್ ನಾಯಿಮರಿಯನ್ನು ದತ್ತು ತೆಗೆದುಕೊಂಡರು. ಈ ಜಾತಿಯ ನಾಯಿಗಳು ದೈತ್ಯವಾಗಿ ಬೆಳೆಯುವ ಕಾರಣ ಈ ನಾಯಿ ಮರಿ ದೊಡ್ಡದಾಗಿದೆ ಮತ್ತು ಸಾಮಾನ್ಯ ನಾಯಿಮರಿಗಿಂತ ಹೆಚ್ಚು ಆಹಾರ ಸೇವಿಸುತ್ತಿದೆ ಎಂದು ಈ ಮಹಿಳೆ ಭಾವಿಸಿದ್ದರಂತೆ. ಇದರ ಆಹಾರ ಸೇವನೆ ಹೆಚ್ಚಾಗಿದ್ದರೂ, ತಮ್ಮ ಮನೆಯ ನಾಯಿಯಂತೆ ಎರಡು ವರ್ಷಗಳ ಕಾಲ ಸುಯುನ್ ಸಾಕಿದ್ದರು. ಎರಡು ವರ್ಷಗಳ ನಂತರ, ತಮ್ಮ ನಾಯಿ ಸುಮಾರು 113 ಕೆಜಿ ತೂಕವಿದ್ದು ದೈತ್ಯವಾಗಿದ್ದದ್ದನ್ನು ನೋಡಿ ಇವರಿಗೆ ಅನುಮಾನ ಶುರುವಾಯಿತು. ಅದು ಬೆಳೆದಂತೆ, ಅದರ ನಡವಳಿಕೆಯು ನಾಯಿಗೆ ಹೋಲದೆ ಇರುವುದನ್ನು ಕಂಡು ಮಹಿಳೆ ವೃತ್ತಿಪರರನ್ನು ಸಂಪರ್ಕಿಸಲು ನಿರ್ಧರಿಸಿದರು. ಆಗ ಆಕೆಗೆ ತಿಳಿದದ್ದು ಎರಡು ವರ್ಷಗಳಿಂದ ತಾನು ಸಾಕುತ್ತಿದ್ದದ್ದು ಟಿಬೆಟಿಯನ್ ಮಾಸ್ಟಿಫ್ ನಾಯಿಯನ್ನಲ್ಲ, ಅದು ಏಷ್ಯಾಟಿಕ್ ಕಪ್ಪು ಕರಡಿ ಎಂದು! “ಅವನು ಹೆಚ್ಚು ಬೆಳೆದಂತೆ, ಕರಡಿಯಂತೆ ಕಾಣುತ್ತಿದ್ದನು” ಎಂದು ಮಹಿಳೆ ಚೀನಾದ ಮಾಧ್ಯಮವೊಂದಕ್ಕೆ ಹೇಳಿದರು. ಕರಡಿಯೆಂದು ಖಚಿತವಾದ ಬಳಿಕ ಅದಕ್ಕೆ ಇಂಜೆಕ್ಷನ್ ಕೊಟ್ಟು ಮಲಗಿಸಿ ನಂತರ ಯುನ್ನಾನ್ ವನ್ಯಜೀವಿ ರಕ್ಷಣಾ ಕೇಂದ್ರಕ್ಕೆ ಕೊಂಡೊಯ್ಯಲಾಯಿತು.