ನ್ಯೂಸ್ ನಾಟೌಟ್: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲವುಂಟಾಗಿದ್ದು ಬಾರಿ ದುರಂತವೊಂದು ತಪ್ಪಿದೆ. ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದು ಲ್ಯಾಂಡಿಂಗ್ಗೆ ಅಡಚಣೆ ಉಂಟಾದ ಘಟನೆ ಕಲಬುರಗಿಯ ಜೇವರ್ಗಿ ಪಟ್ಟಣ ಹೊರವಲಯದಲ್ಲಿ ನಡೆದಿದೆ.
ಜೇವರ್ಗಿಯಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ರಥಯಾತ್ರೆ ಸಂಬಂಧ ಯಡಿಯೂರಪ್ಪ ಜೇವರ್ಗಿಗೆ ಆಗಮಿಸಿದ್ದರು. ಹೆಲಿಕಾಪ್ಟರ್ ಮೂಲಕ ಬಂದ ಬಿಎಸ್ ಯಡಿಯೂರಪ್ಪ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗುವ ವೇಳೆ ಪ್ಲಾಸ್ಟಿಕ್ ಚೀಲಗಳು ಹಾರಿಬಂದಿವೆ. ತಕ್ಷಣ ಎಚ್ಚೆತ್ತ ಪೈಲೆಟ್ ಹೆಲಿಕಾಪ್ಟರ್ನ್ನು ಲ್ಯಾಂಡ್ ಮಾಡದೆ ಬೇರೆಡೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕ್ಷಣಕಾಲ ಆತಂಕ ಸೃಷ್ಟಿಯಾಗಿತ್ತು.
ಹೆಲಿಕಾಪ್ಟರ್ ಲ್ಯಾಂಡ್ ಆಗುವ ಜಾಗದಲ್ಲಿ ಪ್ಲಾಸ್ಟಿಕ್ ಚೀಲಗಳು ಇತ್ತು. ಆ ಸಂದರ್ಭದಲ್ಲಿ ಹೆಲಿಕಾಪ್ಟರ್ ರೆಕ್ಕೆಯ ರಭಸದ ಗಾಳಿಗೆ ಎಂತಹ ವಸ್ತುಗಳು ಕೂಡ ಮೇಲಕ್ಕೆ ಹಾರುತ್ತವೆ. ಅಲ್ಲಿದ್ದ ಪ್ಲಾಸ್ಟಿಕ್ ಚೀಲಗಳು ಮೇಲಕ್ಕೆ ಹಾರಿಬಂದು, ತಕ್ಷಣ ಪೈಲೆಟ್ ಲ್ಯಾಂಡ್ ಮಾಡದೆ ಇದ್ದುದ್ದರಿಂದ ಬಾರಿ ಅನಾಹುತವೊಂದು ತಪ್ಪಿದೆ.
ಘಟನೆ ಬಗ್ಗೆ ಸ್ವತಃ ಪೈಲೆಟ್ ಜೋಸೇಫ್ ಅನುಭವ ಹಂಚಿಕೊಂಡಿದ್ದಾರೆ. ಈ ರೀತಿಯಾದರೆ ನಿರ್ಧಾರ ತೆಗೆದುಕೊಳ್ಳಲು ಪೈಲೆಟ್ಗೆ ಕಷ್ಟವಾಗುತ್ತದೆ. ಲ್ಯಾಂಡ್ ಆಗುವ ವೇಳೆ ಬ್ಯಾಗ್ ಸೇರಿದಂತೆ ಸುತ್ತಮುತ್ತ ಯಾವುದೇ ವಸ್ತುಗಳು ಇರಬಾರದು. ಆದರೆ ನಮಗೆ ಎಲ್ಲವೂ ತರಬೇತಿ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಹೇಳಿರುತ್ತಾರೆ. ಕೆಲ ಪ್ಲಾಸ್ಟಿಕ್ ಚೀಲ ಹಾರಿದ್ದರಿಂದ ಮೊದಲು ಲ್ಯಾಂಡ್ ಮಾಡಲಿಲ್ಲ. ಯಾವ ರೀತಿಯ ಲೋಪ ಆಗಿದೆ ಅಂತ ವಿಶುವಲ್ನಲ್ಲಿಯೇ ಗೊತ್ತಾಗುತ್ತದೆ ಎಂದಿದ್ದಾರೆ.