ನ್ಯೂಸ್ನಾಟೌಟ್: ಎನ್ಐಎ ಅಧಿಕಾರಿಗಳು ಸಂಚರಿಸುತ್ತಿದ್ದ ಪೊಲೀಸ್ ವಾಹನ ಮಾಣಿ-ಮೈಸೂರು ಹೆದ್ದಾರಿಯ ಸಂಪ್ಯ ಪೊಲೀಸ್ ಠಾಣಾ ಮುಂಭಾಗದಲ್ಲಿ ಬೈಕ್ಗೆ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.ಅಪಘಾತದಿಂದ ಬೈಕ್ನಲ್ಲಿದ್ದ ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಮ್ಯಾನೇಜರ್ ಲಕ್ಷ್ಮಣ ನಾಯ್ಕ ಬಿ. (೫೦) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಲಕ್ಷ್ಮಣ ನಾಯ್ಕ ಪುತ್ತೂರಿನಿಂದ ಆರ್ಲಪದವು ಕಡೆಗೆ ಬೈಕ್ನಲ್ಲಿಸಂಚರಿಸುತ್ತಿದ್ದಾಗ ಸುಳ್ಯದಿಂದ ಪುತ್ತೂರಿಗೆ ಸಂಚರಿಸುತ್ತಿದ್ದ ಪೊಲೀಸ್ ವಾಹನ ಸಂಪ್ಯ ಠಾಣಾ ಮುಂಭಾಗದಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತಕ್ಕೆ ಕಾರಣವಾದ ಪೊಲೀಸ್ ವಾಹನ ಜಿಲ್ಲೆಯ ಡಿ.ಆರ್. ವಿಭಾಗಕ್ಕೆ ಸೇರಿದ್ದು ಎಂದು ತಿಳಿದು ಬಂದಿದೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಮತ್ತು ಬಿಹಾರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಈ ಸಂದರ್ಭ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಲಕ್ಷ್ಮಣ ನಾಯ್ಕ ಅವರು ಕಳೆದ 10 ವರ್ಷಗಳಿಂದ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 1999ರಲ್ಲಿ ಸಂಘದಲ್ಲಿ ಕೆಲಸಕ್ಕೆ ಸೇರಿದ ಅವರು ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರಾಗಿದ್ದರು.ಮೃತರು ತಾಯಿ ಸರಸ್ವತಿ, ಪಾಣಾಜೆ ವಿವೇಕ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪತ್ನಿ ಅನುರಾಧ, ಪುತ್ರಿಯರಾದ ತೃಷಾ ಮತ್ತು ತನ್ವಿ, ಸಹೋದರ ರಾಮ ನಾಯ್ಕ್, ಸಹೋದರಿಯರಾದ ಪುಷ್ಪಾ, ಶಶಿಕಲಾ ಅವರನ್ನು ಅಗಲಿದ್ದಾರೆ.
ಬೆಳಿಗ್ಗೆ ಪುತ್ತೂರಿನಿಂದ ಆಂಬ್ಯುಲೆನ್ಸ್ ಮೂಲಕ ಬಂದ ಪಾರ್ಥಿವ ಶರೀರವನ್ನು ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಡಲಾಯಿತು. ಈ ವೇಳೆ ಪಾಣಾಜೆ ಗ್ರಾಮದ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ನೆರೆದು ಅಂತಿಮ ದರ್ಶನ ಪಡೆದರು.ಅವರ ಸ್ವಗೃಹ ಕೋಟೆ ಮನೆಗೆ ಕರೆದೊಯ್ದು ಅಂತಿಮ ವಿಧಿವಿಧಾನ ನೆರವೇರಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಮನೆಯಲ್ಲಿಯೂ ಪಾಣಾಜೆ, ನಿಡ್ಪಳ್ಳಿ, ಬೆಟ್ಟಂಪಾಡಿ ಗ್ರಾಮದ ನೂರಾರು ಸಾರ್ವಜನಿಕರು ಪಾಲ್ಗೊಂಡು ಅಂತಿಮ ದರ್ಶನ ಪಡೆದರು.