ನ್ಯೂಸ್ ನಾಟೌಟ್: ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡು 13 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಹೆಬ್ಬಾಳ ಸಮೀಪದ ಗುಡ್ಡದಹಳ್ಳಿಯಲ್ಲಿ ನಡೆದಿದೆ.
ಘಟನೆಯ ವಿವರ:
ಸಿಲಿಂಡರ್ ಫಿಲ್ಲಿಂಗ್ ಅಂಗಡಿಯಲ್ಲಿ ಘಟನೆ ನಡೆದಿದ್ದು, ಅಂಗಡಿ ಪಕ್ಕದಲ್ಲಿ ಬಾಲಕ ಮಹೇಶ್ ನಿಂತಿದ್ದ. ಸ್ಫೋಟದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.ಬಾಲಕ ಮಹೇಶ್ ಮೂಲತಃ ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದವನು. ಕೂಲಿ ಕಾರ್ಮಿಕ ದಂಪತಿ ಮಲ್ಲಪ್ಪ, ಸರಸ್ವತಿಯವರ 2ನೇ ಪುತ್ರ.ಆಸ್ಪತ್ರೆ ಎದುರು ಮಹೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಬಾಲಕ ಮಹೇಶ್ ಚೋಳನಾಯಕನಹಳ್ಳ ಅಲ್ಲಿರುವ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ. ಕಳೆದ ಎಂಟು ವರ್ಷಗಳಿಂದ ಮೃತರ ಪೊಷಕರು ಕೂಲಿ ಕೆಲಸ ಮಾಡುತ್ತಿದ್ದರು. ದೇವರಾಜ್ ಎಂಬುವರಿಗೆ ಸೇರಿದ ಸಿಲಿಂಡರ್ ರೀಫಿಲ್ಲಿಂಗ್ ಮಾಡುವ ಗೋಡೌನ್ನಲ್ಲಿ ಲಿಯಾಕತ್ ಎಂಬುವನು ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ. ಈ ವೇಳೆ ಮನೆಯ ಪಕ್ಕದಲ್ಲಿ ಬಾಲಕ ಆಟವಾಡುತ್ತಿದ್ದಾಗ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಬ್ಲಾಸ್ಟ್ ರಭಸಕ್ಕೆ ಬಾಲಕನ ದೇಹ ಛಿದ್ರವಾಗಿದೆ ಎನ್ನಲಾಗುತ್ತಿದೆ. ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸದ್ಯ ಘಟನೆಯ ಬೆನ್ನಲ್ಲೇ ಲಿಯಾಕತ್ ಎಸ್ಕೇಪ್ ಆಗಿದ್ದು, ಆತನ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.