ನ್ಯೂಸ್ ನಾಟೌಟ್: ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್ 24 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಶನಿವಾರ ಕರೆ ನೀಡಿದೆ.ಕಳೆದ ನಾಲ್ಕು ದಿನಗಳಿಂದ ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳು ಶನಿವಾರ ಸಂಜೆ ಧರಣಿ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಧ್ಯಕ್ಷ ಚಂದ್ರಶೇಖರ್ ಅವರು ಮಾತನಾಡಿ, ಆರನೇ ವೇತನ ಆಯೋಗದ ಮಾದರಿಯಲ್ಲಿ ಸಾರಿಗೆ ನೌಕರರಿಗೆ ವೇತನ ನೀಡುವುದಾಗಿ 2021ರ ಏಪ್ರಿಲ್ ನಲ್ಲಿ ಸರ್ಕಾರ ಲಿಖಿತ ಭರವಸೆ ನೀಡಿತ್ತು. ಎರಡು ವರ್ಷ ಕಳೆದರೂ ಯಾವುದೇ ಬೇಡಿಕೆ ಈಡೇರಿಸಿಲ್ಲ. ಬಜೆಟ್ ನಲ್ಲಿಯೂ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಉಲ್ಲೇಖಿಸಿಲ್ಲ. ಹೀಗಾಗಿ ಮುಷ್ಕರ ನಡೆಸಲಾಗುವುದು ಎಂದು ಹೇಳಿದರು.
ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಮತ್ತು ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸತತ ಮೂರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು ಕೂಡ 2023-24 ರ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಸರ್ಕಾರ ಕೊಟ್ಟ ಲಿಖಿತ ಭರವಸೆ ಈಡೇರಿಸದ ಕಾರಣ ಅನಿವಾರ್ಯವಾಗಿ ಮಾ. 24 ರಿಂದ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ನೌಕರರ ಸಮಸ್ಯೆಗಳ ಪರಿಹಾರಕ್ಕೆ ವಿವಿಧ ರೀತಿಯ ಹೋರಾಟ ನಡೆಸಿದ್ದರೂ ಸ್ಪಂದಿಸಿಲ್ಲ. ಮಾರ್ಚ್ 1 ರಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ, ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿಲ್ಲ. ಹೀಗಾಗಿ ಮಾರ್ಚ್ 24 ರಿಂದ ಬಸ್ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.