ನ್ಯೂಸ್ ನಾಟೌಟ್: ಎಷ್ಟೋ ಜನ ಕಳ್ಳತನ, ಮರ್ಡರ್, ವಂಚನೆ ಹೀಗೆ ಹಲವಾರು ಕೃತ್ಯಗಳನ್ನು ಎಸಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೇಗೆಲ್ಲಾ ಪ್ಲಾನ್ ಮಾಡುತ್ತಾರೆ.ಆದರೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಎರಡೇ ದಿನಗಳಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿ ಬೀಳುತ್ತಾರೆ. ಆದರೆ ಚೀನಾದ ವ್ಯಕ್ತಿಯೊಬ್ಬ ಪೆಟ್ರೋಲ್ ಬಂಕ್ ನಿಂದ ಹಣ ಕದ್ದು, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ 14 ವರ್ಷಗಳ ಕಾಲ ಗುಹೆಯಲ್ಲಿ ತಲೆಮರೆಸಿಕೊಂಡಿದ್ದ ಘಟನೆ ಬೆಳಕಿಗೆ ಬಂದಿದೆ.
ಮೊಫು ಎಂಬ ವ್ಯಕ್ತಿ 2009ರಲ್ಲಿ ತನ್ನ ಸಹಚರರೊಂದಿಗೆ ಪೆಟ್ರೋಲ್ ಬಂಕ್ನಲ್ಲಿ 156 ಯುವಾನ್ ಅಂದರೆ ಭಾರತೀಯ ಕರೆನ್ಸಿಯಲ್ಲಿ 1859 ರೂ.ವನ್ನು ಕದ್ದಿದ್ದ. ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಗುಹೆಯೊಂದರಲ್ಲಿ ತಲೆ ಮರೆಸಿಕೊಂಡಿದ್ದ. ಆತ ಬರೋಬ್ಬರಿ 14 ವರ್ಷಗಳ ಕಾಲ ಯಾರಿಗೂ ಕಾಣದಂತೆ ವಾಸಿಸಿದ್ದ. ಕೊನೆಗೂ ಆತ ಪೊಲೀಸರಿಗೆ ಶರಣಾಗಿದ್ದಾನೆ. ಈ ಘಟನೆ ಚೀನಾದ ಹ್ಯೂಬೆ ಪ್ರಾಂತ್ಯದಲ್ಲಿ ನಡೆದಿದೆ. ಎನ್ಶಿ ಸಿಟಿಯ ಲಿಯು ಮೊಫು ಎಂಬ ವ್ಯಕ್ತಿ ಪೆಟ್ರೋಲ್ ಬಂಕ್ನಲ್ಲಿ ಹಣ ಕದ್ದಿದ್ದ, ಲೂಟಿ ಮಾಡಿದ ಹಣದಲ್ಲಿ ಮೊಫು ಮತ್ತು ಅವನ ಸಹಚರರು 60 ಯುವಾನ್ ಖರ್ಚು ಮಾಡಿದ್ದರು. ಉಳಿದ ಹಣವನ್ನು ಹಂಚಿಕೊಂಡರು. ತನಿಖೆಯ ಬಳಿಕ ಮೊಫು ಸಹಚರರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.