ನ್ಯೂಸ್ ನಾಟೌಟ್: ಸಿಲಿಕಾನ್ ಸಿಟಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತಾಯಿ ಮೃತಪಟ್ಟಿದ್ದಾಳೆ ಎಂಬ ಅರಿವು ಇಲ್ಲದೆ ಬಾಲಕನೋರ್ವ ಎರಡು ದಿನಗಳ ಕಾಲ ತಾಯಿಯ ಮೃತದೇಹದ ಪಕ್ಕದಲ್ಲೇ ಸಮಯ ಕಳೆದಿರುವ ಘಟನೆ ಫೆಬ್ರವರಿ 26 ರಂದು ಬೆಂಗಳೂರಿನ ಗಂಗಾ ನಗರದಲ್ಲಿ ನಡೆದಿದೆ.
44 ವರ್ಷದ ಅಣ್ಣಮ್ಮ ಎಂಬ ಮಹಿಳೆ ಮೃತಪಟ್ಟಿದ್ದರು. ತಾಯಿ ಮಲಗಿದ್ದಾರೆ ಎಂದೇ ತಿಳಿದು 14 ವರ್ಷದ ಬಾಲಕ ತನ್ನ ತಾಯಿಯ ಶವದ ಜತೆ ಎರಡು ದಿನ ಕಳೆದಿದ್ದಾನೆ. ಅಣ್ಣಮ್ಮ ಅವರ ಪತಿ ಕಳೆದ ಕೆಲ ವರ್ಷಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ಮಾತನಾಡಲು ಬಾರದ ಅಣ್ಣಮ್ಮ ಕೂಲಿ ಕೆಲಸ ಮಾಡಿಕೊಂಡು ಮಗನನ್ನು ನೋಡಿಕೊಳ್ಳುತ್ತಿದ್ದರು. ಆದರೆ ಏಕಾಏಕಿ ಕಳೆದ ಎರಡು ದಿನಗಳ ಹಿಂದೆ ನಿದ್ದೆ ಮಾಡುತ್ತಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಫೆಬ್ರವರಿ 26ರಂದು ಲೋ ಬಿಪಿ ಮತ್ತು ಶುಗರ್ನಿಂದಾಗಿ ಅಣ್ಣಮ್ಮ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಅಮ್ಮ ಮನೆಯಲ್ಲಿ ಮಲಗಿದ್ದಾಳೆ. ಅಡುಗೆ ಏನು ಮಾಡಿಲ್ಲ ಅಂತ ಹೇಳಿ ನಿತ್ಯ ಶಾಲೆಗೆ ಹೋಗುತ್ತಿದ್ದನಂತೆ.ಸಂಜೆ ಮನೆಗೆ ಬಂದು ಆಟವಾಡುತ್ತಿದ್ದ ಕಾಲ ಕಳೆಯುತ್ತಿದ್ದನಂತೆ. ರಾತ್ರಿಯಾಗುತ್ತಿದ್ದಂತೆ ಸಂಬಂಧಿಗಳ ಮನೆಗೆ ಹೋಗಿ ಅಮ್ಮ ಮಲಗಿದ್ದಾಳೆ ಅಂತ ಹೇಳಿ ಊಟ ಮಾಡಿಕೊಂಡು ಬಂದು ಮನೆಗೆ ಬಂದು ಅಮ್ಮನ ಮೃತದೇಹದ ಪಕ್ಕದಲ್ಲೇ ಮಲಗಿಕೊಳ್ಳುತ್ತಿದ್ದನಂತೆ. ಆದರೆ ಏರಿಯಾದ ಜನರಿಗೆ ತಾಯಿ ಸಾವಿನ ಬಗ್ಗೆ ಕೊಂಚವೂ ಮಾಹಿತಿ ಸಿಕ್ಕಿರಲಿಲ್ಲ. ನಂತರ ತಂದೆ ಸ್ನೇಹಿತರಿಗೆ ತನ್ನ ತಾಯಿ ಮಾತನಾಡ್ತಿಲ್ಲ ಎಂದು ಹೇಳಿದ್ದು, ಅವರು ಮನೆಗೆ ಬಂದು ನೋಡಿದಾಗ ಅಣ್ಣಮ್ಮ ಮೃತಪಟ್ಟಿರುವುದು ಗೊತ್ತಾಗಿದೆ.
ತಾಯಿ ಮತ್ತು ಮಗ ಇಬ್ಬರೇ ಮನೆಯಲ್ಲಿ ವಾಸವಿದ್ರು. ಆದ್ರೆ ಈಗ ತಾಯಿ ಕೂಡ ಮೃತಪಟ್ಟಿದ್ದು ಅಮಾಯಕ ಬಾಲಕ ತಬ್ಬಲಿಯಾಗಿದ್ದಾನೆ. ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.