ಚಿಕ್ಕಬಳ್ಳಾಪುರ: ನೀವು ಬಸ್ಸಿನಲ್ಲಿ ಬೆಕ್ಕಿನ ಮರಿ, ನಾಯಿ ಮರಿ, ಕೋಳಿಯನ್ನು ಹಿಡಿದುಕೊಂಡು ಪ್ರಯಾಣ ಮಾಡುತ್ತಿದ್ದಿರಾ? ಹಾಗಾದ್ರೆ ಸ್ವಲ್ಪ ಎಚ್ಚರವಾಗಿರಿ.ನಿಮ್ಮ ಜತೆ ನಿಮ್ಮೊಂದಿಗಿರುವ ಸಾಕು ಪ್ರಾಣಿಗಳಿಗೂ ಟಿಕೆಟ್ ಹಣ ಪಾವತಿಸಬೇಕಾಗುತ್ತೆ. ಅರೆ.. ಇದೇನಿದು? ಸಾಕು ಪ್ರಾಣಿಗಳಿಗೂ ಟಿಕೆಟಿಗೂ ಏನು ಸಂಬಂಧ ಎಂದು ಯೋಚನೆ ಮಾಡ್ತಿದ್ದೀರಾ? ಹೌದು, ಇಂಥದೊಂದು ಘಟನೆ ನಡೆದಿದೆ. ಕೇಳುವುದಕ್ಕೆ ಹಾಸ್ಯವೆಂದೆನಿಸಿದರೂ ಇದು ನಮ್ಮ ರಾಜ್ಯದಲ್ಲೇ ನಡೆದ ನೈಜ ಘಟನೆ.
ಏನಿದು ಘಟನೆ?
ಚಿಕ್ಕಬಳ್ಳಾಪುರ ಘಟಕದ ಕೆಎಸ್ಆರ್ ಟಿಸಿ ಬಸ್ನಲ್ಲಿ ಪೆರೇಸಂದ್ರದಿಂದ ಗುಡಿಬಂಡೆ ತಾಲೂಕಿನ ಸೋಮೇಶ್ವರಕ್ಕೆ ಹೋಗುತ್ತಿದ್ದ ಪ್ರಯಾಣಿಕ ತನ್ನ ಜತೆ ಕೋಳಿ ಕೊಂಡೊಯ್ಯುತ್ತಿದ್ದ. ಈ ವೇಳೆ ನಿರ್ವಾಹಕ ಕೋಳಿಗೂ 5 ರೂ. ಟಿಕೆಟ್ ನೀಡಿದ. ಟಿಕೆಟ್ ಪಡೆದ ಮಾಲೀಕ ಕೋಳಿಯನ್ನು ಸೀಟ್ ಮೇಲೆ ಕೂರಿಸಿ ಪ್ರಯಾಣ ಬೆಳೆಸಿದ. ಪ್ರಯಾಣಿಕರು ಕೋಳಿ ತೆಗೆದು ಸೀಟ್ ಬಿಟ್ಟು ಕೊಡಿ ಎಂದು ಕೇಳಿದಾಗ, ನಾನು ಟಿಕೆಟ್ ಪಡೆದಿದ್ದೇನೆ. ಹಾಗಾಗಿ ಕೋಳಿಯನ್ನು ನನ್ನ ಜತೆ ಸೀಟ್ನಲ್ಲಿ ಕೂರಿಸಿದ್ದೇನೆ ಎಂದು ಪ್ರಯಾಣಿಕ ಉತ್ತರ ನೀಡಿದ್ದಾನೆ. ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದೆ.