ನ್ಯೂಸ್ನಾಟೌಟ್: ರಾಜ್ಯ ಸರ್ಕಾರಿ ನೌಕರರ ಮುಷ್ಕರದ ಬಗ್ಗೆಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಶೇಕಡಾ 17 ವೇತನ ಹೆಚ್ಚಳಕ್ಕೆ ನಿರ್ಧರಿಸಿದ್ದಾರೆ. ಈ ಆದೇಶವನ್ನು ನೌಕರರ ಸಂಘ ಸ್ವಾಗತಿಸಿದ್ದು, ಈ ಮೂಲಕ ಮುಷ್ಕರವನ್ನು ವಾಪಸ್ ಪಡೆದುಕೊಂಡಿದೆ.
ಸಿಎಂ ಸೂಚನೆ ಮೇರೆಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಏಪ್ರಿಲ್ 1ರಿಂದ ನೂತನ ಆದೇಶ ಜಾರಿಯಾಗಲಿದೆ. ಅದೇ ರೀತಿ ಹಳೇ ಪಿಂಚಣಿ ಯೋಜನೆ ಅಧ್ಯಯನಕ್ಕಾಗಿ ಸಮಿತಿ ರಚಿಸಿದ್ದು, 2 ತಿಂಗಳಲ್ಲಿ ವರದಿ ನೀಡಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಒಪ್ಪಿಗೆ ಸೂಚಿಸಿ ಮುಷ್ಕರ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ರಾಜ್ಯಾದ್ಯಂತ ಇಂದು (ಮಾರ್ಚ್ 1) ಮುಷ್ಕರ ನಡೆಸಿದ್ದರು. ಇದರಿಂದ ರಾಜ್ಯದಲ್ಲಿ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಿ ಸಮಸ್ಯೆಗಳು ಎದುರಾಗಿದ್ದವು. ಈ ಬಗ್ಗೆ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ನೌಕರರ ಶೇ.17ರಷ್ಟು ವೇತನ ಹೆಚ್ಚಿಸಿ ಆದೇಶ ಹೊರಡಿಸಿದರು. ಈ ಬೆನ್ನಲ್ಲೆ ಸರ್ಕಾರಿ ನೌಕರರು ಮುಷ್ಕರ ವಾಪಾಸ್ ಪಡೆದಿರುವುದಾಗಿ ಘೋಷಿಸಿದ್ದಾರೆ.