ನ್ಯೂಸ್ನಾಟೌಟ್: ದಿನೇ ದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಇದೀಗ ಗೃಹ ಬಳಕೆಯ ಸಿಲಿಂಡರ್ 50 ರೂ. ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 350 ರೂ. ಏರಿಕೆ ಮಾಡುವ ಮೂಲಕ ತೈಲ ಕಂಪನಿಗಳು ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಪರಿಷ್ಕೃತ ಬೆಲೆ ಇಂದಿನಿಂದಲೇ ಜಾರಿಗೆ ಬರಲಿದೆ.
14.2 ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ನ ಬೆಲೆ 50 ರೂ.ಏರಿಕೆಯಾಗಿ ಪರಿಷ್ಕೃತ ದರ 1103 ರೂ. ಆಗಲಿದೆ. 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ 350.50 ರೂ. ಏರಿಕೆಯಾಗಿದ್ದು, ಪರಿಷ್ಕೃತ ದರ 2119.50 ರೂ. ಆಗಲಿದೆ. ಕಳೆದ 6 ತಿಂಗಳಿಂದ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಆದರೀಗ ವಾಣಿಜ್ಯ ಮತ್ತು ಗೃಹ ಬಳಕೆಯ ಸಿಲಿಂಡರ್ ದರ ಹೆಚ್ಚಾಗಿದೆ.
ಸ್ಥಳೀಯ ತೆರಿಗೆಗಳಿಂದಾಗಿ ಅಡುಗೆ ಅನಿಲದ ಬೆಲೆ ಒಂದು ರಾಜ್ಯದಿಂದ ಇನ್ನೊಂದಕ್ಕೆ ವೆತ್ಯಾಸವಿದೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಣೆ ಮಾಡುತ್ತಾರೆ. ಪ್ರತಿ ಕುಟುಂಬ ಒಂದು ವರ್ಷದಲ್ಲಿ 12 ಸಿಲಿಂಡರ್ಗಳಿಗೆ ಅರ್ಹವಾಗಿದೆ. ಅದಕ್ಕಿಂತ ಹೆಚ್ಚಾದರೆ, ಗ್ರಾಹಕರು ಎಲ್ಪಿಜಿ ಸಿಲಿಂಡರ್ಗಳ ಯಾವುದೇ ಹೆಚ್ಚುವರಿ ಖರೀದಿಗಳನ್ನು ಮಾರುಕಟ್ಟೆ ಬೆಲೆಗೆ ನೀಡಬೇಕಾಗುತ್ತದೆ.
ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಲೆದಂತಾಗಿದೆ. ಕಳೆದ ಆರು ತಿಂಗಳುಗಳಿಂದ ಗೃಹಬಳಕೆಯ ಸಿಲಿಂಡರ್ ದರ ಪರಿಷ್ಕರಣೆಯಾಗಿರಲಿಲ್ಲ. ಆದರೆ ಇಂದಿನಿಂದ ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಾಗಿದೆ. ಇದರಿಂದ ಜನಸಾಮಾನ್ಯರ ಹೊರೆ ಮತ್ತಷ್ಟು ಹೆಚ್ಚಾಗಲಿದೆ. ಹೋಟೆಲ್ನಲ್ಲಿ ತಿಂಡಿಗಳ ಬೆಲೆಯಲ್ಲೂ ಹೆಚ್ಚಳವಾಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಶೀಘ್ರದಲ್ಲೇ ದಿನಾಂಕ ಘೋಷಣೆಯಾಗಲಿದ್ದು, ವಿಪಕ್ಷಗಳಿಗೆ ಬೆಲೆ ಏರಿಕೆ ವಿಷಯ ಪ್ರಮುಖ ಅಸ್ತ್ರವಾಗಿ ಸಿಕ್ಕಿದಂತಾಗಿದೆ.