ನ್ಯೂಸ್ನಾಟೌಟ್: ಉಪ್ಪಿನಂಗಡಿ ಸಹಸ್ರಲಿಂಗೇಶ್ವರನ ಸಾನಿಧ್ಯ ಸಂಗಮ ಕ್ಷೇತ್ರವಾಗಿದ್ದು, ಮೋಕ್ಷ ಧಾಮವೂ ಹೌದು. ಮುಂಬರುವ ದಿನಗಳಲ್ಲಿ ಈ ಕ್ಷೇತ್ರ ಪ್ರವಾಸೋದ್ಯಮ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ. ಇದಕ್ಕಾಗಿ ಕಿಂಡಿ ಅಣೆಕಟ್ಟು, ವಾಕ್ ವೇ ನಿರ್ಮಾಣಕ್ಕೆ 90 ಕೋಟಿ ರೂಪಾಯಿಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಇದಕ್ಕೆ ಮಂಜೂರಾತಿ ದೊರೆಯುವ ವಿಶ್ವಾಸವಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಬಳಿ 2 ಕೋಟಿ ರೂ. ವೆಚ್ಚದಲ್ಲಿ ಕುಮಾರಧಾರ ನದಿಗೆ ತಡೆಗೋಡೆ ರಚನೆ ಹಾಗೂ 1 ಕೋಟಿ ರೂ.ವೆಚ್ಚದಲ್ಲಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಬಳಿಯಲ್ಲಿ ನೇತ್ರಾವತಿ ನದಿಗೆ ತಡೆಗೋಡೆ ರಚನೆ ಕಾಮಗಾರಿಗೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ನೆಲ, ಜಲ ಸಂರಕ್ಷಣೆ, ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಸೀಮಿತವಾಗುವಂತೆ ಪಶ್ಚಿಮ ವಾಹಿನಿ ಯೋಜನೆಯ ಮೂಲಕ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಬಜೆಟ್ನಲ್ಲಿ ಪ್ರತಿ ವರ್ಷ 500 ಕೋಟಿ ರೂ ಮೀಸಲಿಡುತ್ತಿದ್ದು, ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ಅತಿ ಹೆಚ್ಚಿನ ಅನುದಾನ ಪಡೆದ ಕ್ಷೇತ್ರಗಳಲ್ಲಿ ಪುತ್ತೂರು ಒಂದಾಗಿದೆ. ದೇವಾಲಯದ ಬಳಿ 80 ಮೀಟರ್ ಉದ್ದದ ಶಾಶ್ವತ ತಡೆಗೋಡೆ ನಿರ್ಮಾಣವಾಗಲಿದ್ದು, ಉಪ್ಪಿನಂಗಡಿ ಸಹಕಾರಿ ಸಂಘದ ಬಳಿ ನೇತ್ರಾವತಿ ನದಿಗೆ 40 ಮೀಟರ್ ಉದ್ದ ಹಾಗೂ 8 ಮೀಟರ್ನ ತಡೆಗೋಡೆ ನಿರ್ಮಾಣವಾಗಲಿದೆ ಎಂದರು.
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಜಯಂತ ಪೊರೋಳಿ, ಪ್ರೇಮಲತಾ ಕಾಂಚನ, ಹರೀಶ್ ಉಪಾಧ್ಯಾಯ, ವ್ಯವಸ್ಥಾಪಕ ವೆಂಕಟೇಶ ರಾವ್, ಸಿಬ್ಬಂದಿ ಪದ್ಮನಾಭ ಕುಲಾಲ್, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಚಂದ್ರ ಮುಳಿಯ, ಸದಸ್ಯರಾದ ಸುರೇಶ್ ಅತ್ರೆಮಜಲು, ಧನಂಜಯ ನಟ್ಟಿಬೈಲ್, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಸಾದ್ ಕೆ.ವಿ., ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ನಿರ್ದೇಶಕರಾದ ಯಶವಂತ ಗೌಡ, ಜಗದೀಶ ರಾವ್ ಮಣಿಕ್ಕಳ, ಯತೀಶ್ ಶೆಟ್ಟಿ, ರಾಮ ನಾಯ್ಕ, ಕುಂಞ, ಸಚಿನ್ ಮುದ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಲೇರಿ ವೇಗಸ್, ಮಾಜಿ ಅಧ್ಯಕ್ಷ ಪ್ರಕಾಶ್ ರೈ ಬೆಳ್ಳಿಪ್ಪಾಡಿ, ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್, ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಹಮ್ಮಬ್ಬ ಶೌಕತ್ ಅಲಿ, ಸದಾನಂದ ಶೆಟ್ಟಿ, ಚಂದಪ್ಪ ಮೂಲ್ಯ, ಕೈಲಾರ್ ರಾಜಗೋಪಾಲ ಭಟ್, ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ವಿಷ್ಣು ಕಾಮತ್, ಸಹಾಯಕ ಇಂಜಿನಿಯರ್ಗಳಾದ ರಾಕೇಶ್ ಕುಂದರ್, ಶಿವ ಪ್ರಸನ್ನ, ಗುತ್ತಿಗೆದಾರರಾದ ಪ್ರಭಾಕರ ಶೆಟ್ಟಿ, ಫೈಝಲ್ ಮತ್ತಿತರರಿದ್ದರು.