ನ್ಯೂಸ್ ನಾಟೌಟ್: ಹಲ್ಲೆ ಪ್ರಕರಣದ ತಪ್ಪಿತಸ್ಥ ವೃದ್ಧ ಅಪರಾಧಿಗೆ ರಾಜ್ಯ ಹೈಕೋರ್ಟ್ ಇದೀಗ ಕುತೂಹಲಕಾರಿ ಶಿಕ್ಷೆಯೊಂದನ್ನು ವಿಧಿಸಿದೆ. ಒಂದು ವರ್ಷ ಅಂಗನವಾಡಿಯಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡಬೇಕು ಎಂದು ಅಪರಾಧಿಗೆ ರಾಜ್ಯ ಹೈಕೋರ್ಟ್ ಸೂಚಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ 81 ವರ್ಷದ ಐತಪ್ಪ ನಾಯ್ಕ ಎಂಬಾತ ಈ ಶಿಕ್ಷೆಗೆ ಒಳಗಾದವರು. ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಅವರ ಜೀವಕ್ಕೆ ಅಪಾಯವಾಗುವಂತೆ ಗಾಯಗೊಳಿಸಿದ್ದ ಆರೋಪದಲ್ಲಿ 2008ರಲ್ಲಿ ಐತಪ್ಪ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿತ್ತು. 2012ರ ಜುಲೈ 7ರಂದು ನ್ಯಾಯಾಲಯ ಐತಪ್ಪ ನಾಯ್ಕ ಅವರನ್ನು ದೋಷಿ ಎಂದು ತೀರ್ಪು ನೀಡಿ ಮೂರು ದಿನ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂ. ದಂಡ ವಿಧಿಸಿತ್ತು. ಇದರ ವಿರುದ್ಧ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ್ದ ದಕ್ಷಿಣ ಕನ್ನಡದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐತಪ್ಪ ನಾಯ್ಕ ಅವರ ಶಿಕ್ಷೆಯ ಪ್ರಮಾಣವನ್ನು ಎರಡು ವರ್ಷಕ್ಕೆ ಹೆಚ್ಚಳ ಮಾಡಿ, ಐದು ಸಾವಿರ ರೂಪಾಯಿ ದಂಡ ವಿಧಿಸಿ 2014ರ ಜುಲೈ 21ರಂದು ಆದೇಶಿಸಿತ್ತು. ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಪ್ರಕರಣದಲ್ಲಿ ಅರ್ಜಿದಾರನ ವಯಸ್ಸನ್ನು ಪ್ರಮುಖವಾಗಿ ಪರಿಗಣಿಸಬೇಕು. ಜತೆಗೆ, ಮಕ್ಕಳಿಲ್ಲದ ವೃದ್ಧನೇ ಪತ್ನಿಯನ್ನು ನೋಡಿಕೊಳ್ಳಬೇಕಿದೆ. ಸಿವಿಲ್ ನ್ಯಾಯಾಲಯ ನೀಡಿದ್ದ ಮೂರು ದಿನದ ಜೈಲು ಶಿಕ್ಷೆಯನ್ನು ಆತ ಈಗಾಗಲೇ ಅನುಭವಿಸಿದ್ದಾನೆ. ಆದ್ದರಿಂದ ಶಿಕ್ಷೆ ರದ್ದುಪಡಿಸಬೇಕು ಎಂದು ಐತಪ್ಪ ನಾಯ್ಕ ಪರ ವಕೀಲರು ಮನವಿ ಮಾಡಿದ್ದರು.
ಎಲ್ಲವನ್ನು ಆಲಿಸಿದ ನ್ಯಾಯಾಲಯ ಅಪರಾಧಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ ಸಮಾಜ ಸೇವೆ ಮಾಡಲು ಸಿದ್ಧವಿರುವುದಾಗಿ ಆತನೆ ಒಪ್ಪಿಕೊಂಡಿದ್ದಾನೆ. ಈ ಎಲ್ಲ ಅಂಶವನ್ನು ಪರಿಗಣಿಸಿ, ಅರ್ಜಿದಾರ ಈಗಾಗಲೇ ಮೂರು ದಿನ ಶಿಕ್ಷೆ ಅನುಭವಿಸಿರುವ ಹಿನ್ನೆಲೆಯಲ್ಲೆ ಶಿಕ್ಷೆಯ ಪ್ರಮಾಣ ಹೊಂದಾಣಿಕೆಯಾಗಲಿದೆ ಎಂದು ನ್ಯಾಯಾಲಯ ಅರ್ಜಿದಾರರ ಒಪ್ಪಿಕೊಂಡಿರುವಂತೆ ಅಂಗನವಾಡಿ ಕೇಂದ್ರದಲ್ಲಿ ಒಂದು ವರ್ಷ ಸ್ವಯಂಸೇವಕನಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದೆ.