ನ್ಯೂಸ್ ನಾಟೌಟ್ :ವ್ಯಕ್ತಿಯೊಬ್ಬರು ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ಬಿಗ್ ಟ್ವಿಸ್ಟ್ ಸಿಕ್ಕಿದೆ.ಹೊಸ ಮನೆಯ ಸೆಂಟ್ರಿಗ್ ಕೆಲಸಕ್ಕೆ ಬಂದಾತ ಮನೆ ಯಜಮಾನಿಯ ಜತೆ ಸೇರಿ ಮನೆಯ ಯಜಮಾನನ್ನು ಕೊಲೆಗೈದ ಘಟನೆ ನಿನ್ನೆ ಬಂಟ್ವಾಳದ ಇಡ್ಕಿದು ಎಂಬಲ್ಲಿಂದ ವರದಿಯಾಗಿತ್ತು. ಬಂಟ್ವಾಳ ತಾಲೂಕಿನ ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (39) ಕೊಲೆಯಾದವರು. ಅರವಿಂದ ಭಾಸ್ಕರ ಪತ್ನಿ ಆಶಾ ಹಾಗೂ ಮನೆಯ ಸೆಂಟ್ರಿಂಗ್ ಕೆಲಸ ನಿರ್ವಹಿಸಿದ ಯೋಗೀಶ ಗೌಡ ಪ್ರಕರಣದ ಪ್ರಮುಖ ಆರೋಪಿಗಳು ಎಂದು ತಿಳಿದು ಬಂದಿದೆ.
ಅರವಿಂದ ಭಾಸ್ಕರ ಅವರು ಸುಮಾರು 2 ವರ್ಷಗಳ ಹಿಂದೆ ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದಾರೆ. ಇನ್ನೇನು ಹೊಸ ಮನೆ ಕಟ್ಟಿ ಗೃಹಪ್ರವೇಶದ ಕನಸು ಕಾಣುತ್ತಿರುವಾಗಲೇ ಕೊಲೆಗೀಡಾದ ದುರಂತ ಘಟನೆ ಸಂಭವಿಸಿದೆ. ಅದರ ಸೆಂಟ್ರಿಂಗ್ ಕೆಲಸವನ್ನು ಯೋಗೀಶ್ ಗೌಡ ಎಂಬವ ನಿರ್ವಹಿಸುತ್ತಿದ್ದ. ಈ ಮೂಲಕ ಭಾಸ್ಕರ ಅವರ ಪತಿ ಆಶಾಳಿಗೆ ಪರಿಚಯವಾಗಿದ್ದ. ಮಾತ್ರವಲ್ಲದೇ ಪರಿಚಯ ತುಂಬಾ ಸಲುಗೆಗೂ ತಿರುಗಿದೆ. ಯೋಗೀಶ ಗೌಡ ಹಾಗೂ ಆಶಾ ಮಧ್ಯೆ ಅನ್ಯೂನ್ಯ ಸಂಬಂಧವಿರುವುದು ಪೊಲೀಸ್ ತನಿಖೆಯಲ್ಲಿಯೂ ಬೆಳಕಿಗೆ ಬಂದಿದೆ. ಇವರಿಬ್ಬರ ನಡುವಿನ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದರು ಎಂಬ ಕಾರಣಕ್ಕೆ ಈ ಕೊಲೆ ನಡೆದಿದೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ. ಪತಿಯ ಕೊಲೆಯನ್ನು ಮುಚ್ಚಿಹಾಕಲು ಪತ್ನಿ ಆತ ರಾತ್ರಿ ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿ ಜನರನ್ನು ನಂಬಿಸುವ ಯತ್ನ ಮಾಡಿರುವುದು ಕೂಡ ಇದೆ ವೇಳೆ ಬೆಳಕಿಗೆ ಬಂದಿದೆ.ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ.
ಸ್ಥಳೀಯ ನಿವಾಸಿಯೊಬ್ಬರು ಕುತ್ತಿಗೆಯನ್ನು ಅದುಮಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯ ವ್ಯಕ್ತಪಡಿಸಿದ್ದರು. ಇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಯೋಗೀಶ ಗೌಡ ಹಾಗೂ ಆಶಾ ಅವರನ್ನು ಕೊಲೆ ಆರೋಪಿಗಳು ಎಂದು ಹೆಸರಿಸಿದ್ದಾರೆ. ಅರವಿಂದ ಭಾಸ್ಕರ ಅವರು ಅಡಿಕೆ ಮಾರಾಟ ಮಾಡಿ ಬಂದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ ಬಗ್ಗೆ ಆತನ ಪತ್ನಿ ಆಕ್ಷೇಪಿಸುತ್ತಿದ್ದರು ಎನ್ನಲಾಗಿದೆ. ಯೋಗೀಶ ಆಶಾಳೊಂದಿಗೆ ಸೇರಿಕೊಂಡು ಅರವಿಂದ ಭಾಸ್ಕರನಿಗೆ ಹಲ್ಲೆ ನಡೆಸುತ್ತಿದ್ದರು. ಈ ಕುರಿತ ಮಾಹಿತಿಯನ್ನು ಸ್ವತ: ಭಾಸ್ಕರ್ ದೂರುದಾರ ರಘುನಾಥ ಅವರಲ್ಲಿ ಹೇಳಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಅರವಿಂದ ಭಾಸ್ಕರ್ ಅವರನ್ನು ಅವರ ಪತ್ನಿ ಮತ್ತು ಯೋಗೀಶ ಗೌಡ ಸೇರಿ ಫೆ 25 ರ ರಾತ್ರಿ 10 ಗಂಟೆಯಿಂದ ಫೆ 26 ರ ಬೆಳಿಗ್ಗೆ 7 ಗಂಟೆಯ ನಡುವೆ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.