ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯಲ್ಲಿ ಹೆಜ್ಜೇನು ದಾಳಿಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಹುಲಿತಾಳದ ಅಶ್ವಿನ್ ಕುಮಾರ್ (45) ಮತ್ತು ಗೋಣಿಕೊಪ್ಪದ ಬಡಗರಕೇರಿಯ ವೇಲು (80) ಎಂದು ಗುರುತಿಸಲಾಗಿದೆ.
ಅಶ್ವಿನ್ ಕುಮಾರ್ ಹಾಗೂ ಅವರ ಸಹೋದರಿ, ಸಹೋದರನ ಜಮೀನಿನಲ್ಲಿ ಮೂಲಂಗಿ ಕಟಾವು ಮಾಡುತ್ತಿದ್ದಾಗ ಜೇನುನೊಣಗಳ ಹಿಂಡು ಅವರ ಮೇಲೆ ದಾಳಿ ಮಾಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಶ್ವಿನ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಗಾಯಗೊಂಡ ಸಹೋದರಿ ಚೇತರಿಸಿಕೊಳ್ಳುತ್ತಿದ್ದಾರೆ.
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ವೇಲು ಮತ್ತು ಅವರ ಪತ್ನಿ ಲಕ್ಷ್ಮೀ ಬಡಗರಕೇರಿಯಲ್ಲಿ ತಮ್ಮ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದಾಗ ಜೇನುನೊಣಗಳ ಹಿಂಡು ದಾಳಿ ಮಾಡಿವೆ. ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರೂ ವೇಲು ಮೃತಪಟ್ಟಿದ್ದು, ಲಕ್ಷ್ಮಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.