ನ್ಯೂಸ್ ನಾಟೌಟ್: ಹೂವಿನ ಹಾರದ ಮಧ್ಯೆ ಮಾಂಸವನ್ನು ಮಿಶ್ರಣ ಮಾಡಿದ ಅ ಹಾರವನ್ನು ದೇಗುಲಕ್ಕೆ ತಲುಪಿಸಿ ದೇವಳವನ್ನು ಅಶುದ್ಧಗೊಳಿಸುವ ಕಿಡಿಗೇಡಿಗಳ ಕೃತ್ಯವೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿಕನಸವಾಡಿಯ ಶನಿವಾಡಿಯ ಇತಿಹಾಸ ಪ್ರಸಿದ್ಧ ಶನಿಮಹಾತ್ಮ ದೇವಾಲಯದಲ್ಲಿ ನಡೆದಿದೆ.
ದೇವಾಲಯವನ್ನೇ ಟಾರ್ಗೆಟ್ ಮಾಡಿದ್ದ ಕಿಡಿಗೇಡಿಗಳು ಶನಿ ದೇವರ ಪೂಜೆಗೆ ಮಾಂಸದ ತುಂಡುಗಳನ್ನಿಟ್ಟ ಹೂವಿನ ಹಾರವನ್ನು ದೇಗುಲದ ಸಿಬ್ಬಂದಿಗೆ ನೀಡಿ ಪರಾರಿಯಾಗಿದ್ದಾರೆ. ಆದರೆ ದೇವರ ಕಾರಣಿಕ ಎಂಬಂತೆ ಹೂವಿನ ಹಾರ ಗರ್ಭಗುಡಿ ತಲುಪುವ ಮುನ್ನವೇ ಅದರ ಅಸಲಿಯತ್ತು ಬಯಲಾಗಿದೆ.
ತಕ್ಷಣವೇ ದೇವಳದ ಸಿಬ್ಬಂದಿ ಹೂವಿನ ಹಾರವನ್ನು ತೆರವುಗೊಳಿಸಿ ದೇವಳವನ್ನು ಶುಚಿಗೊಳಿಸಿದ್ದಾರೆ. ಕೃತ್ಯಕ್ಕೆ ಕಾರಣರಾದ ಕಿಡಿಗೇಡಿಗಳು ದೇವಸ್ಥಾನಕ್ಕೆ ಬಂದು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತಂತೆ ಅಪರಿಚಿತ ಯುವಕರ ವಿರುದ್ಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಘಟನೆ ಬೆನ್ನಲ್ಲೇ ಎಚ್ಚೆತ್ತಿರುವ ಆಡಳಿತ ಮಂಡಳಿ ದೇವಸ್ಥಾನದಲ್ಲಿ ಪೇಪರ್ ಒಳಗೊಂಡ ಹಾರಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಇನ್ನು ಈ ಕ್ಷೇತ್ರದ ದೇವರ ಮಹಿಮೆಯಿಂದಲೇ ನಡೆಯಬೇಕಿದ್ದ ಅಚಾತುರ್ಯವೊಂದು ತಪ್ಪಿದೆ ಎನ್ನುತ್ತಾರೆ ಇಲ್ಲಿನ ಭಕ್ತರು.