ನ್ಯೂಸ್ ನಾಟೌಟ್: ಅವಧಿಪೂರ್ವ ಜನಿಸಿದ ಮಗು ಜೀವಂತವಿದ್ದರೂ ಮೃತಪಟ್ಟಿದೆ ಎಂದು ಘೋಷಿಸಿದ ಆಘಾತಕಾರಿ ಘಟನೆಯೊಂದು ದೆಹಲಿಯ ಎಲ್ಎನ್ಜೆಪಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ವೈದ್ಯರ ಮಾತು ನಂಬಿ ಮಗುವನ್ನು ಮಣ್ಣು ಮಾಡಲು ಪಾಲಕರು ಪೆಟ್ಟಿಗೆಯಲ್ಲಿ ಹಾಕಿ ಕೊಂಡೊಯ್ದು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಮಗು ಉಸಿರಾಡುವುದನ್ನು ಗಮನಿಸಿ ಜೀವಂತ ಇರುವುದು ಗಮನಕ್ಕೆ ಬಂದಿದೆ ಎಂದು ಕುಟುಂಬದ ಸದಸ್ಯರು ವಿವರಿಸಿದ್ದಾರೆ. ಮಗು ಪೆಟ್ಟಿಗೆಯಲ್ಲಿ ಉಸಿರಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ ವೈದ್ಯರ ಎಡವಟ್ಟು ಬೆಳಕಿಗೆ ಬಂದಿದೆ.
ವೈದ್ಯರ ಎಡವಟ್ಟಿನಿಂದ ಮಗು ಅನ್ಯಾಯವಾಗಿ ಪೆಟ್ಟಿಗೆಯಲ್ಲಿ ಬಂಧಿಯಾಗಬೇಕಾಯಿತು. ಒಂದು ಸ್ವಲ್ಪ ಹೆಚ್ಚು ಕಮ್ಮಿಯಾದರೂ ಮಗು ಉಸಿರುಗಟ್ಟಿ ಸಾಯುವ ಸಾಧ್ಯತೆಯಿತ್ತು. ಆದರೆ ಮಗುವಿನ ಆಯಸ್ಸು ಗಟ್ಟಿ ಇತ್ತು ಎಂದು ಪಾಲಕರು ತಿಳಿಸಿದ್ದಾರೆ.
ಮಗು ಜೀವಂತ ಇರುವುದು ಗೊತ್ತಾದ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ವೈದ್ಯರು ಬಾಗಿಲು ತೆರೆಯದೆ ಮಗುವಿನ ಚಿಕಿತ್ಸೆಗೆ ನಿರಾಕರಿಸಿದ್ದು, ಭದ್ರತಾ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು. ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವಂತೆ ಒತ್ತಾಯಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಪೊಲೀಸರ ಮಧ್ಯಪ್ರವೇಶದಿಂದ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಯಿತು ಎಂದು ಹೇಳಿದ್ದಾರೆ.