ನ್ಯೂಸ್ನಾಟೌಟ್: ಕರಾವಳಿಯಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆಗೈದ ಹಂತಕರಿಗೆ ಕಠಿಣ ಶಿಕ್ಷೆಯಾಗಲಿದೆ. ಪ್ರಕರಣದ ಕುರಿತು ಎನ್ಐಎ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿಗಳಾದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರವೀಣ್ ಕುಟುಂಬದವರ ಜತೆ ಸರ್ಕಾರ ಸದಾ ಇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಈ ಬಗ್ಗೆ ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ನಳಿನ್ಕುಮಾರ್ ಕಟೀಲ್, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡುವ ಕೆಲಸವನ್ನು ಕಾನೂನಿನ ಮೂಲಕ ಎನ್ಐಎ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಿಜೆಪಿ ಪಾತ್ರವಿದೆ ಎಂಬ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್, ಕಾಂಗ್ರೆಸ್ ಮುಖಂಡರ ಇಂಥ ಆರೋಪ ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದ ಅವಧಿಯಲ್ಲೇ ಅತೀ ಹೆಚ್ಚು ಗಲಭೆಗಳು ನಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸ್ವಾತಂತ್ರ್ಯ ಬಂದ ನಂತರ ದೇಶದ ಜನತೆಯ ಕಿವಿಗೆ ಹೂ ಇಟ್ಟು ಆಡಳಿತ ನಡೆಸಿರುವುದೇ ಕಾಂಗ್ರೆಸ್ ಸಾಧನೆ. ಒಂದು ವೇಳೆ ಕಾಂಗ್ರೆಸ್ ಉತ್ತಮವಾಗಿ ಆಡಳಿತ ನಡೆಸಿದ್ದರೆ ಭಾರತ ಈ ವೇಳೆಗಾಗಲೇ ಇನ್ನಷ್ಟು ಎತ್ತರದಲ್ಲಿರುತ್ತಿತ್ತು. ಈ ಹಿಂದೆ ಕಾಂಗ್ರೆಸ್ ಮಾಡಿದ್ದ ಲೋಪಗಳನ್ನೆಲ್ಲ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸರಿಪಡಿಸುತ್ತ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ. ಕೇಂದ್ರ ಸರ್ಕಾರದ ಜನೋಪಯೋಗಿ ಬಜೆಟ್ನ ಘೋಷಣೆಗಳನ್ನು ಸಹಿಸಲಾಗದೆ ಕಾಂಗ್ರೆಸ್ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.