ನ್ಯೂಸ್ ನಾಟೌಟ್: ಸಣ್ಣ ಪುಟ್ಟ ಘಟನೆಗಳು ಘೋರ ದುರಂತಕ್ಕೆ ಕಾರಣವಾಗುತ್ತಿರುವ ಸನ್ನಿವೇಶ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಅಮ್ಮ ಮೊಬೈಲ್ ಕೊಡಲಿಲ್ಲ ಎಂಬ ಸಿಟ್ಟಿನಲ್ಲಿ ವಿದ್ಯಾರ್ಥಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆಯಯ ವಾಲ್ತಾಡಿ ಗ್ರಾಮದ ನಾಗದಡ್ಕ ಎಂಬಲ್ಲಿ ಭಾನುವಾರ (ಫೆ.19 ) ನಡೆದಿದೆ.
ವಾಲ್ತಾಡಿ ಗ್ರಾಮದ ಉಮೇಶ್ ಪೂಜಾರಿ ಎಂಬವರ ಪುತ್ರಿ ಯುತಿ(15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಈಕೆ ಅಳಿಯೂರು ಪ್ರೌಢಶಾಲಾ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಯುತಿ ಪಠ್ಯೇತರ ವಿಷಯದಲ್ಲೂ ಮುಂದಿದ್ದಳು.
ಎಂದಿನಂತೆ ಭಾನುವಾರ ತಂದೆ ಕೂಲಿ ಕೆಲಸಕ್ಕೆ ಹೋಗಿದ್ದರು. ಸ್ವಲ್ಪ ಸಮಯದ ಬಳಿಕ ತಾಯಿ ಮತ್ತು ಕಿರಿಯ ಮಗಳು ಶಿರ್ತಾಡಿ ಪೇಟೆಗೆ ಹೊರಟಿದ್ದರು. ಈ ವೇಳೆ ಯುತಿಯನ್ನೂ ಪೇಟೆಗೆ ಬರುವಂತೆ ತಾಯಿ ಕರೆದಿದ್ದರು. ಆದರೆ ತಾನು ಬರುವುದಿಲ್ಲ ತನಗೆ ಬರೆಯಲು ಇದೆ ಎಂದು ಹೇಳಿ ಪೇಟೆಗೆ ಹೋಗುವ ವೇಳೆ ತಾಯಿಯ ಮೊಬೈಲ್ ತನಗೆ ಕೊಡುವಂತೆ ಒತ್ತಾಯಿಸಿದ್ದಳು. ತಾಯಿ ಮೊಬೈಲ್ ಕೊಡುವುದಿಲ್ಲ ಎಂದು ಬೈದು ನಿರಾಕರಿಸಿ ಪೇಟೆಯಿಂದ ವಾಪಾಸ್ ಬಂದ ಬಳಿಕ ಕೊಡುತ್ತೇನೆ ಎಂದು ಹೇಳಿ ತಾಯಿ ಮತ್ತು ಕಿರಿಯ ಮಗಳು ಹೋಗಿದ್ದರು.
ಆದರೆ ಮನೆಗೆ ವಾಪಸ್ ಬಂದ ಬಳಿಕ ಮಗಳು ಮನೆಯಲ್ಲಿಲ್ಲದಾಗ ಗಾಬರಿಗೊಂಡು ಹುಡುಕಾಡಿದಾಗ ಸಾಯಂಕಾಲ ನಾಲ್ಕು ಗಂಟೆ ಹೊತ್ತಿಗೆ ಯುತಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸದ್ಯ ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.