ನ್ಯೂಸ್ ನಾಟೌಟ್ : ರಾಜ್ಯ ಸರ್ಕಾರದ ಬಜೆಟ್ ಹಿನ್ನೆಲೆಯಲ್ಲಿ ಸರ್ಕಾರಿ ಸಾರಿಗೆ ನೌಕರರಿಗೆ ಈ ಹಿಂದೆ ಸಲ್ಲಿಸಿದ್ದ ಬೇಡಿಕೆಗಳು ಈಡೇರದೆ ನಿರಾಸೆಯಾಗಿದ್ದು, ಮಾರ್ಚ್ 1 ರಂದು ರಾಜ್ಯದಾದ್ಯಂತ ಸರ್ಕಾರದ ವಿರುದ್ಧ ಸಾರಿಗೆ ನೌಕರರು ತೀವ್ರ ಮುಷ್ಕರ ನಡೆಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಫೆ. 17 ರಂದು ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿರುವ ಬಜೆಟ್ನಲ್ಲಿ ಸಾರಿಗೆ ನೌಕರರ 7 ನೇ ವೇತನದ ಬಗ್ಗೆ ಯಾವುದೇ ಬೇಡಿಕೆಗಳು ಈಡೇರಿಸಿಲ್ಲ . ಈ ಕಾರಣಗಳಿಂದ ಪ್ರಮುಖ ಬೇಡಿಕೆಗಳ ಪಟ್ಟಿಯೊಂದಿಗೆ ಬೀದಿಗಿಳಿದು ಪ್ರತಿಭಟಿಸಲು ನಿರ್ಧಾರಮಾಡಿರುವುದಾಗಿ ವರದಿ ತಿಳಿಸಿದೆ.
ಮಾಜಿ. ಸಿ.ಎಂ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಾರಿಗೆ ನೌಕರರಿಗೆ 7 ನೇ ವೇತನ ಆಯೋಗ ಜಾರಿ ಮಾಡುವ ಭರವಸೆಯನ್ನು ನೀಡಿದ್ದರು. ಆದರೆ ಬಜೆಟ್ನಲ್ಲಿ ಬಸವರಾಜ್ ಬೊಮ್ಮಾಯಿ ಈ ಬಗ್ಗೆ ಏನೂ ಘೋಷಿಸಿಲ್ಲ. ಈ ಭರವಸೆಗಳು ಬರೀ ಮಾತಿನಲ್ಲಿ ಮಾತ್ರ ಉಳಿದಿದೆ ಎಂದು ಸಿಡಿದೆದ್ದ ಸರ್ಕಾರಿ ಸಾರಿಗೆ ನೌಕರರು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕೆಂದು ಸಾರಿಗೆ ಮುಷ್ಕರಕ್ಕೆ ಕರೆ ನೀಡಿದ್ದಾರೆ.
- ಈ ಹಿಂದಿನ ಮುಷ್ಕರದ ಸಮಯದಲ್ಲಿ ಆಗಿರುವ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು.
- ಸರ್ಕಾರ ನೀಡಿರುವ ಲಿಖಿತ ಭರವಸೆಯಂತೆ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮತ್ತು ಸರಿ ಸಮಾನ ವೇತನ ನೀಡಬೇಕು.
- ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಬೇಕು.
- ಸಾರಿಗೆ ಸಂಸ್ಥೆಯನ್ನು ಖಾಸಾಗೀಕರಣ ಮಾಡುವ ಯೋಜನೆಗಳನ್ನು ಕೈ ಬಿಡಬೇಕು.
2021 ರಲ್ಲಿ ಸಾರಿಗೆ ನೌಕರರು ಪ್ರಮುಖ ಬೇಡಿಕೆಗಳಿಗೆ ತೀವ್ರ ಹೋರಾಟ ನೆಡಸಿದ್ದರು. ಆಗಿನ ೨ ತಿಂಗಳ ನಿರಂತರ ಹೋರಾಟದಿಂದ ಅಂದು ಪ್ರಯಾಣಿಕರು ಪರದಾಡುವಂತಾಯಿತು ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅನೇಕ ನೌಕರರು ಉದ್ಯೋಗ ಕಳೆದುಕೊಳ್ಳುವಂತಾಗಿತ್ತು, ಆ ನಂತರದ ದಿನಗಳಲ್ಲಿ ಅವರನ್ನು ಮತ್ತೆ ಸೇರಿಸಿಕೊಳ್ಳಲಾಯಿತಾದರೂ ಅವರ ಬೇಡಿಕೆಗಳು ಇನ್ನೂ ಈಡೇರಿಲ್ಲ ಅನ್ನುತ್ತಾರೆ ಸಾರಿಗೆ ನೌಕರರು.
ಆದರೆ ಈ ವರ್ಷ ಬೇಡಿಕೆಳನ್ನು ಈಡೇರಿಸದಿದ್ದಲ್ಲಿ ಕುಟುಂಬ ಸಮೇತ ಬೀದಿಗಿಳಿದು ಹೋರಾಟ ಮಾಡುವುದಾಗಿ ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ.