ನ್ಯೂಸ್ ನಾಟೌಟ್: ಕಾಲ ಬದಲಾದಂತೆ ಜನ ಹೆಚ್ಚು ಸ್ವಾರ್ಥಿಗಳಾಗುತ್ತಿದ್ದಾರೆ. ತನಗೆ ಮಾತ್ರ ಒಳ್ಳೆಯದಾಗಲಿ, ಬೇರೆಯವರಿಗೆ ಏನಾದರೂ ಪರವಾಗಿಲ್ಲ ಅಂತ ಯೋಚಿಸುತ್ತಾರೆ. ತಮ್ಮ ಮನೆ ಸುತ್ತ ಸ್ವಚ್ಛವಾಗಿಟ್ಟುಕೊಂಡು ಕಸವನ್ನು ಇನ್ನೊಬ್ಬರ ಬಾಗಿಲಿಗೆ ತಂದು ಸುರಿಯುತ್ತಾರೆ. ಇಂಥಹುದ್ದೇ ಘಟನೆಯನ್ನು ಹೋಲುವ ಪ್ರಕರಣವೊಂದು ಕೊಡಗಿನ ಅರಣ್ಯ ಪ್ರದೇಶದಲ್ಲಿ ನಡೆದಿದ್ದು ಕೇರಳದಿಂದ ಅಕ್ರಮವಾಗಿ ಕಸವನ್ನು ತೆಗೆದುಕೊಂಡು ಬಂದು ಕಿಡಿಗೇಡಿಗಳು ಕೊಡಗಿನಲ್ಲಿ ಸುರಿಯುತ್ತಿದ್ದಾರೆ. ಇದು ಮನುಕುಲದ ಅವ್ಯವಸ್ಥೆಗೆ ಹಿಡಿದ ಪ್ರತ್ಯಕ್ಷ ಕೈಗನ್ನಡಿಯಾಗಿದೆ.
ಎಲ್ಲಿ-ಏನು?
ಕೇರಳದಿಂದ ವಿವಿಧ ಲಾರಿಗಳಲ್ಲಿ ಅಕ್ರಮವಾಗಿ ಕಸಗಳು ಕೊಡಗಿನ ಮಾಕುಟ್ಟ ಮೀಸಲು ಅರಣ್ಯ ಹಾಗೂ ಬ್ರಹ್ಮಗಿರಿ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಬಂದು ಬೀಳುತ್ತಿವೆ. ಟ್ರಕ್ಗಟ್ಟಲೇ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಪ್ರವಾಸಿಗರೂ ಕೂಡ ದಿನೇ ದಿನೇ ಈ ಪ್ರದೇಶದಲ್ಲಿ ಕಸವನ್ನು ಸುರಿದು ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಸಾಕಷ್ಟು ವನ್ಯ ಜೀವಿಗಳು ಇರುವುದರಿಂದ ಅವುಗಳ ಅಸ್ತಿತ್ವಕ್ಕೆ ದಕ್ಕೆ ಬರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಕೊಡಗು ಸೇವಾ ಕೇಂದ್ರ ಸದಸ್ಯರು ಹಾಗು ಕೆಲವು ಎಚ್ಚೆತ್ತ ನಿವಾಸಿಗಳು ಈ ಸಮಸ್ಯೆಯನ್ನು ಗಮನಕ್ಕೆ ತಂದ ನಂತರವೇ ಅಧಿಕಾರಿಗಳು ಅರಣ್ಯದ ಅಂಚಿನಿಂದ ತ್ಯಾಜ್ಯವನ್ನು ಸಂಗ್ರಹಿಸುತಿದ್ದಾರೆ ಮತ್ತು ಸುಡಲು ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ಕೇರಳದಿಂದ ತ್ಯಾಜ್ಯಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕ ಹಾಗೂ ಕ್ಲೀನರ್ ಅನ್ನು ಅರಣ್ಯಾಧಿಕಾರಿಗಳು ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.