ನ್ಯೂಸ್ ನಾಟೌಟ್ : ಕೊಡಗು ಅಂದಾಕ್ಷಣ ಥಟ್ಟನೆ ನೆನಾಪಾಗೋದು ಮಡಿಕೇರಿ ಸೊಬಗು.ಅಲ್ಲಿನ ಪ್ರಕೃತಿ ಸೌಂದರ್ಯವನ್ನು ವರ್ಣಿಸಲಸಾಧ್ಯ. ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿ ಆಗಮಿಸುತ್ತಾರೆ.ರಜಾ ದಿನಗಳಲ್ಲಂತು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಜನವೋ ಜನ.ಅದರಲ್ಲು ಮಡಿಕೇರಿಯ ರಾಜಾಸೀಟ್ ಗೆ ಹೋಗದವರಿಲ್ಲ.ತನ್ನದೇ ಆದ ವಿಶಿಷ್ಟತೆಗಳನ್ನೊಳಗೊಂಡು ರಾಜಾಸೀಟ್ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿರುತ್ತದೆ.ಇದೀಗ ಅದರ ಕೂಗಳತೆ ದೂರದಲ್ಲೇ ಸಾಹಸೋದ್ಯಾನವೊಂದು ಸಿದ್ಧವಾಗುತ್ತಿದೆ.ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು ಸದ್ಯದಲ್ಲೇ ಮಡಿಕೇರಿಯ ಪ್ರೇಕ್ಷಣೀಯ ಸ್ಥಳಗಳ ಸಾಲಿಗೆ ಮತ್ತೊಂದು ತಾಣವೂ ಸೇರ್ಪಡೆಯಾಗಲಿದೆ.
ಮಡಿಕೇರಿಗೆ ಬಂದಾಗ ಚಿಣ್ಣರು ಎಂಜಾಯ್ ಮಾಡೋದಕ್ಕಾಗಿಯೇ ಇದರ ರಚನೆಯಾಗುತ್ತಿದೆ.ಇದರಿಂದ ನಿಮ್ಮ ಜತೆ ಬರುವ ಮಕ್ಕಳು ಫುಲ್ ಖುಷ್ ಆಗಲಿದ್ದಾರೆ.ಯಾಕೆಂದರೆಇದು ಚಿಣ್ಣರನ್ನೇ ದೃಷ್ಟಿಯಲ್ಲಿಟ್ಟು ಕೊಂಡ ಸಾಹಸೋದ್ಯಾನವಾಗಿದೆ.ಮಕ್ಕಳಿಗೆ ಬೇಕಾದ ಸಾಹಸ ಕ್ರೀಡೆ ಗಳು ಸೇರಿದಂತೆ ಯುವಕರಿಗೆ ಬೇಕಾದ ಸಾಹಸ ಪರಿಕರಗಳೂ ಇಲ್ಲಿ ಲಭ್ಯವಾಗಲಿವೆ.ಜಿಲ್ಲಾಡಳಿತ ಇದಕ್ಕಾಗಿಯೇ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಿದೆ. ಹೊರಗಡೆಯಿಂದಲೇ ಬಾರಿ ಗಮನಸೆಳೆಯುತ್ತಿರುವ ಉದ್ಯಾನಕ್ಕೆ ಒಳಗಡೆ ಎಂಟ್ರಿಯಾಗುತ್ತಿದಂತೆ ಫುಲ್ ಮನರಂಜನೆ ಸಿಗಲಿದೆ. ‘ಪಿಪಿಪಿ’ ಮಾದರಿಯಲ್ಲಿ ಅನುಷ್ಠಾನಗೊಂಡಿರುವ ಈ ಯೋಜನೆಯ ಟೆಂಡರ್ ನ್ನು ಬೆಂಗಳೂ ರಿನ ‘ಸದರ್ನ್ ಅಡ್ವೆಂಚರ್’ ಪಡೆದುಕೊಂಡು ಕಾಮಗಾರಿ ಆರಂಭಿಸಿದೆ.
ಕಾಮಗಾರಿ ಪೂರ್ಣಗೊಂಡ ಬಳಿಕ ಊಹಿಸಿಕೊಳ್ಳುವುದಕ್ಕು ಅಸಾಧ್ಯವಾಗುವ ರೀತಿಯಲ್ಲಿ ಇದರ ನಿರ್ಮಾಣವಾಗಲಿದೆ.ಏಕೆಂದರೆ ಟೆಂಡರ್ ಪಡೆದಿರುವ ಕಂಪನಿಯು ಇಲ್ಲಿನ ಸಾಹಸ ಪರಿಕರಗಳಲ್ಲಿ ಕೆಲವನ್ನು ವಿದೇಶದಿಂದ, ಮತ್ತೆ ಕೆಲವನ್ನು ಪುಣೆಯಿಂದ ತರಿಸಿದೆ ಎನ್ನಲಾಗಿದೆ. ಜರ್ಮನಿಯಿಂದ ಭದ್ರತಾ ಬೆಲ್ಟ್ಗಳನ್ನೂ ಆಮದು ಮಾಡಿಕೊಳ್ಳಲಾಗಿದ್ದು, ಎಲ್ಲ ಬಗೆಯ ಸುರಕ್ಷತಾ ಮುನ್ನಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.ರಾಜಾಸೀಟ್ ಪಕ್ಕದಲ್ಲೇ ಇದು ಇರುವುದರಿಂದ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಬಹುದು ಅನ್ನೋದು ಲೆಕ್ಕಾಚಾರ.
ರಾಜಾಸೀಟ್ ಗ್ರೇಟರ್ ರಾಜಾಸೀಟ್ ಆಗಿರುವುದರಿಂದ ಪ್ರವಾಸಿಗರಿಗೆ ಹೊಸ ಅನುಭವಗಳಾಗುತ್ತಿದೆ.ಗ್ರೇಟರ್ ರಾಜಾಸೀಟ್ ನಿಂದ ಬ್ರಿಡ್ಜ್ ದಾಟಿದರೆ ಸಣ್ಣ ಮಕ್ಕಳ ಆಟಿಕೆಗಳು ಸಿಗಲಿವೆ. ಇವುಗಳನ್ನು ವಿದೇಶದಿಂದ ತರಿಸಲಾಗಿದೆ. ಅಲ್ಲಿಂದ ಮೇಲೆ ಹೋದರೆ ಮಕ್ಕಳಿಗಾಗಿ ಜಂಪಿಂಗ್ ಆಟಿಕೆ ಇದೆ. ಲೋ ರೋಪ್ ಸಹ ಇಲ್ಲೇ ಇದ್ದು, ಸುರಕ್ಷತೆಗಾಗಿ ಬೆಲ್ಟ್, ಹೆಲ್ಮೆಟ್ ಗಳೂ ಇಲ್ಲಿವೆ. ನೆಟ್ ಕ್ಲೈಂಬಿಂಗ್, ಟೈರ್ ಕ್ಲೈಬಿಂಗ್ ಸೇರಿದಂತೆ 6 ಬಗೆಯ ಸಾಹಸ ಕ್ರೀಡೆಗಳು ಇಲ್ಲಿರಲಿದ್ದು, ಮಕ್ಕಳಿಗಂತು ಫುಲ್ ಮನರಂಜನೆ ಸಿಗಬೇಕು ಅನ್ನುವ ದೃಷ್ಟಿಯಲ್ಲಿ ಡಿಸೈನ್ ಆಗುತ್ತಿದೆ.
ಪುಣೆಯಿಂದ ತರಿಸಲಾದ ರಾಕೆಟ್ ಇಜೆಕ್ಟರ್ ಪ್ರಮುಖ ಆಕರ್ಷಣೆ, ಜಿಪ್ಲೈನ್, ಜಾಯಿಂಟ್ಸ್ ವಿಂಗ್ ಸೇರಿದಂತೆ ಇನ್ನೂ ಕೆಲವು ಸಾಹಸ ಕ್ರೀಡಾ ಪರಿಕರಗಳನ್ನು ಅಳವಡಿಸಬೇಕಿದೆ.ಅಂತು ಮಡಿಕೇರಿಯಲ್ಲಿ ಇಲ್ಲಿಯವರೆಗೂ ಸಾಹಸ ಕ್ರೀಡೆಗಳು ಇರಲಿಲ್ಲ. ಮಕ್ಕಳಿಗೆ, ಯುವತಲೆಮಾರಿಗೆ ಬೇಕಾದ ಸಾಹಸ ಪರಿಕರಗಳನ್ನು ರಾಜಾಸೀಟ್ ಉದ್ಯಾನದಲ್ಲಿ ಇರುವಂತದ್ದು ಪ್ರವಾಸಿಗರಿಗೆ ಮುದ ನೀಡಬಲ್ಲುದು. ಪ್ರಕೃತಿ ಸೌಂದರ್ಯವನ್ನು ಆಹ್ಲಾದಿಸಿದ ಬಳಿಕ ಸಾಹಸ ಕ್ರೀಡೆ ಪ್ರವಾಸಿಗರಿಗೆ ಒಂದೊಳ್ಳೆ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನನೇ ಇಲ್ಲ.