ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಮೋಸ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನರಿಗೆ ಮೋಸ ಹೋಗಬೇಡಿ ಎಂದು ಎಷ್ಟೇ ಹೇಳಿದರೂ ಕೆಲವರು ಲಕ್ಷಾಂತರ ರೂಪಾಯಿ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿರುವುದು ಸಾಮಾನ್ಯವಾಗಿದೆ. ಇಂಥಹುದೇ ಒಂದು ವಂಚನೆಗೆ ಇದೀಗ ಕಾರ್ಕಳದ ಯುವತಿಯೊಬ್ಬರು ಒಳಗಾಗಿದ್ದಾರೆ. ಅವರು ಒಂದಲ್ಲ ಎರಡಲ್ಲ ಬರೋಬ್ಬರಿ 7.63 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ವಂಚನೆಗೆ ಒಳಗಾದವರು ಕಾರ್ಕಾಳದ ಎಸ್.ಬಿ.ಐ ಮತ್ತು ಐ.ಸಿ.ಐ.ಸಿ.ಐ ಬ್ಯಾಂಕ್ಗಳಲ್ಲಿ ಎಸ್.ಬಿ ಖಾತೆಗಳನ್ನು ಹೊಂದಿದ್ದಾರೆ.
ಫೆ. 4 ರಂದು ಕಾರ್ಕಳ ಮೂಲದ ಯುವತಿಗೆ ಫೆಲಿಕ್ಸ್ ಡಯಸ್ ಎಂಬ ಫೇಸ್ಬುಕ್ ಖಾತೆದಾರನು ಪರಿಚಯವಾಗಿದ್ದ. ತಾನು ಸೈಪ್ರಸ್ನಲ್ಲಿ ಇದ್ದೇನೆ ಎಂದು ಸುಳ್ಳು ಹೇಳಿ ನಂಬಿಸಿದ್ದ. ಅಲ್ಲದೆ, ವ್ಯಾಲೆಂಟೈನ್ ಡೇ ಗೆ ಉಡುಗೊರೆಯಾಗಿ ಪಾರ್ಸೆಲ್ಗಳನ್ನು ಕಳುಹಿಸುವುದಾಗಿ ಭರವಸೆ ನೀಡಿದ್ದಾನೆ. ಅಲ್ಲದೇ ಫೆ. 13ರಂದು ಸಂತ್ರಸ್ತೆಯ ವಾಟ್ಸ್ ಆ್ಯಪ್ ಸಂಖ್ಯೆಗೆ ಪಾರ್ಸೆಲ್ಗಳ ಫೋಟೋವನ್ನು ಕಳುಹಿಸಿದ್ದರಿಂದ ವಂಚಕನನ್ನು ಸಂಪೂರ್ಣ ನಂಬಿದ್ದಾರೆ. ಈ ನಡುವೆ, ದೆಹಲಿ ವಿಮಾನ ನಿಲ್ದಾಣದ ಸಿಬ್ಬಂದಿಯಂತೆ ಅಪರಿಚಿತ ವ್ಯಕ್ಕಿ 9870189535 ನಂಬರ್ನಿಂದ ಕರೆ ಮಾಡಿ ಪಾರ್ಸೆಲ್ ಗ್ರೌಂಡ್ ಪಾಸ್ಗಾಗಿ ರೂ. 47000 ಪಾವತಿಸುವಂತೆ ಸೂಚಿಸಿದ್ದ. ಈ ಕರೆಯ ಮಾತಿನ ಮೋಡಿಗೆ ಮಣಿದು ವಂಚಕ ವ್ಯಕ್ತಿ ತಿಳಿಸಿದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದರು. ಬಳಿಕ ಇದಲ್ಲದೆ ವಿವಿಧ ಕಾರಣಗಳನ್ನು ನೀಡಿ ಹಣ ಕಳುಹಿಸುವಂತೆ ಒತ್ತಡ ಹಾಕುತ್ತಿದ್ದ ಎಂದು ತಿಳಿದುಬಂದಿದೆ. ಹೀಗೆ ವಂಚಕನ ಒತ್ತಡಕ್ಕೆ ಬರೋಬ್ಬರಿ 7.63 ಲಕ್ಷ ವರ್ಗಾಯಿಸಿದ ಬಳಿಕ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಇದೀಗ ವಂಚನೆ ಪ್ರಕರಣ ಕುರಿತಂತೆ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ವಿಚಾರಣೆ ಮುಂದುವರಿಸಲಾಗಿದೆ.