ನ್ಯೂಸ್ ನಾಟೌಟ್ : ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಇದೀಗ ದೇವಸ್ಥಾನಗಳ ರಕ್ಷಣೆಗೆ ನಿಲ್ಲುತ್ತಿಲ್ಲ ಅನ್ನುವ ಆರೋಪ ಕೇಳಿ ಬರುತ್ತಿದೆ. ಗಣಿಗಾರಿಕೆ ಸುಳಿಗೆ ಸಿಲುಕಿ ನಿತ್ಯ ನಲುಗುತ್ತಿರುವ ಶ್ರೀ ಕಾರಿಂಜೇಶ್ವರ ದೇವಸ್ಥಾನದ ರಕ್ಷಣೆಗೆ ಯಾವೊಬ್ಬ ರಾಜಕೀಯ ನಾಯಕನೂ ನಿಂತಿಲ್ಲ ಅನ್ನುವ ಕೂಗು ಜೋರಾಗಿದೆ. ಈ ನಿಟ್ಟಿನಲ್ಲಿ ಮಹಾಶಿವರಾತ್ರಿಯ ದಿನದಂದೇ ಮತ್ತೊಂದು ಸುತ್ತಿನ ಹೋರಾಟಕ್ಕೆ ಹಿಂದೂ ಜಾಗರಣಾ ವೇದಿಕೆ ಅಣಿಯಾಗಿದೆ. ಈ ಪ್ರಯುಕ್ತ ಶಿವರಾತ್ರಿಯ ವಿಶೇಷ ದಿನವಾದ ಶನಿವಾರ ಸಂಜೆ ಶಿವ ಭಕ್ತ ಮಾಲಾಧಾರಿಗಳು ೪.೩೦ಕ್ಕೆ ವಗ್ಗಾ ಜಂಕ್ಷನ್ನಲ್ಲಿ ಸೇರಿ ಅಲ್ಲಿಂದ ಪಾದಯಾತ್ರೆ ಮೂಲಕ ರುದ್ರಗಿರಿಗೆ ತಲುಪಲಿದ್ದಾರೆ. ಅಲ್ಲಿ ಕೋಟಿ ನಾಮ ಜಪ ಮಂತ್ರದಲ್ಲಿ ಭಕ್ತರು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ಶ್ರೀ ಕ್ಷೇತ್ರ ಕಾರಿಂಜೇಶ್ವರ ಬೆಟ್ಟದ ರಕ್ಷಣೆಗಾಗಿ ಮತ್ತು ಗಣಿಗಾರಿಯ ವಿರುದ್ಧವಾಗಿ ಕರಾವಳಿಯ ವಿವಿಧ ಕಡೆಗಳಿಂದ ಶಿವ ಭಕ್ತರು ಪಾದಯಾತ್ರೆ ಮಾಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಸುಳ್ಯದ ಮಂಡೆಕೋಲು ಘಟಕದ ಹಿಂದೂ ಜಾಗರಣಾ ವೇದಿಕೆಯ ಮಾಲಾಧಾರಿಗಳು ಕೂಡ ವಿಶೇಷವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಬಂಟ್ವಾಳದಲ್ಲಿ ಕಾರಿಂಜೇಶ್ವರನ ಸನ್ನಿಧಿಯಿದೆ. ಇದು ಅತ್ಯಂತ ಅಪರೂಪವಾದ ಶಿವ ದೇಗುಲ. ಇಲ್ಲಿನ ಏಕಶಿಲಾ ಬೆಟ್ಟದಲ್ಲಿ ಶಿವನ ಆಲಯವಿದೆ. ಇದರ ಹತ್ತಿರದಲ್ಲೇ ಕಲ್ಲು ಗಣಿಕಾರಿಗೆ ನಡೆಯುತ್ತಿದೆ. ಇದರಿಂದ ಬೆಟ್ಟ ಕುಸಿಯುವ ಅಪಾಯ ಎದುರಾಗಿದೆ. ಇದರ ಬಗ್ಗೆ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸಿದರೂ ರಾಜ್ಯ ಸರಕಾರ ಸರಿಯಾಗಿ ಸ್ಪಂದಿಸಿಲ್ಲ. ಈ ವಿಚಾರವನ್ನು ಕೂಡಲೇ ಬಗೆ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದೆ ಎಂದು ಹಿಂದೂ ನಾಯಕರು ಎಚ್ಚರಿಕೆ ನೀಡಿದ್ದಾರೆ.