ಮುಂಬೈ: ಪ್ರೊ ಕಬಡ್ಡಿ ಆಟಗಾರರ ಹರಾಜು ಪ್ರಕ್ರಿಯೆ ಇಂದು ಸಂಜೆ 6.30 ಕ್ಕೆ ನಡೆಯಲಿದೆ. ಈಗಾಗಲೇ ವಿವಿಧ ತಂಡಗಳು ಉಳಿಕೆ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು ಹರಾಜಿನಲ್ಲಿ ಯಾರು ಎಷ್ಟು ಕೋಟಿ ರೂ.ವಿಗೆ ಹರಾಜಾಗಲಿದ್ದಾರೆ ಅನ್ನುವುದು ಕುತೂಹಲ ಮೂಡಿಸಿದೆ.
ಈಗಾಗಲೇ 8ನೇ ಆವೃತ್ತಿಗಾಗಿ ವಿವಿಧ ತಂಡಗಳ ಪ್ರಾಂಚೈಸಿ ಒಟ್ಟು 28 ಆಟಗಾರರನ್ನು ಉಳಿಕೆ ಮಾಡಿಕೊಂಡಿದೆ. ಬೆಂಗಳೂರು ಬುಲ್ಸ್ ತಂಡದ ತಾರಾ ಆಟಗಾರ ಪವನ್ ಸೆಹ್ರಾವತ್ ಅವರನ್ನು ಉಳಿಸಿಕೊಂಡಿದೆ. ಇನ್ನು ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಮಣಿಂದರ್ ಸಿಂಗ್ ಅವರನ್ನು ಉಳಿಸಿಕೊಂಡಿದೆ. ಇರಾನ್ ನ ತಾರಾ ಆಟಗಾರ ಫಜಲ್ ಅತ್ರಾಚಲಿ ಅವರನ್ನು ಯು ಮುಂಬಾ ತಂಡ ಉಳಿಕೆ ಮಾಡಿಕೊಂಡಿದ್ದರೆ ಬೆಂಗಾಲ್ ವಾರಿಯರ್ಸ್ ಮೊಹಮ್ಮದ್ ನಭಿಭಕ್ಷ್ ಅವರನ್ನು ಉಳಿಸಿಕೊಂಡಿದೆ.
ಪ್ರತಿ ಫ್ರಾಂಚೈಸಿಗೂ 4.4 ಕೋಟಿ ರೂ.
ಆಟಗಾರರನ್ನು ಖರೀದಿ ಮಾಡುವುದಕ್ಕೆ ಫ್ರಾಂಚೈಸಿಗಳಿಗೆ ತಲಾ 4.4 ಕೋಟಿ ರೂ. ಹಣವನ್ನು ನೀಡಲಾಗಿದೆ. ಈ ಮಿತಿಯೊಳಗೆ ಅವರು ಆಟಗಾರರನ್ನು ಖರೀದಿ ಮಾಡಬೇಕಾಗುತ್ತದೆ.
ಯಾರ ಮೇಲಿದೆ ನಿರೀಕ್ಷೆ
ತಾರಾ ಆಟಗಾರರಾದ ಪರ್ ದೀಪ್ ನರ್ವಾಲ್, ಅಜಯ್ ಠಾಕೂರ್, ರಾಹುಲ್ ಚೌಧರಿ, ರೋಹಿತ್ ಕುಮಾರ್ ಮೇಲೆ ಫ್ರಾಂಚೈಸಿ ದೊಡ್ಡ ಮೊತ್ತವನ್ನು ಹಾಕಬಹುದು ಅನ್ನುವ ನಿರೀಕ್ಷೆ ಇದೆ.