ನ್ಯೂಸ್ ನಾಟೌಟ್: ಸಮುದಾಯದ ಆಸ್ತಿಯಾದ ರಸ್ತೆಗಳ ಇಕ್ಕೆಲಗಳು, ಆಟದ ಬಯಲು, ಪಾರ್ಕ್, ಅರಣ್ಯ ಪ್ರದೇಶ, ನದಿಯ ದಡಗಳು, ಹೊಳೆಯ ಪಾತಳಿ ಮುಂತಾದುವುಗಳಲ್ಲಿ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಎಸೆಯುವುದು ಸಾಮಾನ್ಯವಾಗಿದೆ. ಇನ್ನು, ಜಾತ್ರೆಗಳು ಮುಗಿದ ಬಳಿಕ ಅಂಗಳಗಳಲ್ಲಿ ಕಸ ತುಂಬಿರುವುದು ತೀರಾ ಸಾಮಾನ್ಯ ಸಂಗತಿ. ಇಂದಿನ ನಾಗರಿಕ ಸಮಾಜಕ್ಕೆ ಹೊಂದದ ಸಂಗತಿ ಇದು. ಆದರೆ ಅದು ವಿದ್ಯಾವಂತರಿಂದಲೂ ನಡೆಯುತ್ತಿದೆಯೆಂಬುದು ದುರದೃಷ್ಟಕರ ವಿದ್ಯಮಾನ. ಹೀಗೆ ಬೇಕಾಬಿಟ್ಟಿ ಕಸ ಬಿದ್ದಿರುವುದನ್ನು ಸ್ವಚ್ಛಗೊಳಿಸುವುದು ಒಂದು ದೊಡ್ಡ ಸವಾಲು. ಹಾಗಾಗಿ ಇದಕ್ಕೆ ಪರಿಹಾರವೇನು? ಜನರು ಕಸ ಹಾಕುವ ಸ್ವಭಾವದಿಂದ ಹೊರಗೆ ಬರಬೇಕು. ಕಸ ಎಸೆಯುವುದನ್ನೇ ನಿಲ್ಲಿಸುವುದೇ ಪರಿಹಾರ. ಇದಕ್ಕೊಂದು ಉಪಾಯವೆಂದರೆ ಕಸವನ್ನು ಎಸೆದವರೇ ಅದನ್ನು ಹೆಕ್ಕಿ ಕಸದ ತೊಟ್ಟಿಗೆ ಹಾಕುವಂತೆ ಪ್ರೇರೇಪಿಸಬೇಕು. ಇಂತಹ ಪ್ರೇರಣೆ ನೀಡುವ ಕಾರ್ಯವನ್ನು ಮಕ್ಕಳೇ ಮಾಡಿದರೆ ಹೇಗಿರುತ್ತದೆ? ಅಂತಹ ಒಂದು ಪ್ರಯೋಗವನ್ನು ಸುಳ್ಯದ ಸ್ನೇಹ ಶಾಲೆಯ ಮಕ್ಕಳ ಮೂಲಕ ಶಾಲೆಯ ಸ್ಥಾಪಕ ಡಾ. ಚಂದ್ರಶೇಖರ ದಾಮ್ಲೆಯವರು ಮಾಡಿದ್ದಾರೆ. ಅದಕ್ಕಾಗಿ ಆಸಕ್ತ ವಿದ್ಯಾರ್ಥಿಗಳ ತಂಡವನ್ನು ಕಟ್ಟಿ “ಶ್ವೇತ ಪಡೆ’ ಎಂಬ ಹೆಸರಿಟ್ಟು ಸ್ವಯಂಸೇವಕರಿಗೆ ತರಬೇತಿ ನೀಡಿದರು.
ಇಲ್ಲಿನ ಕಾಯರ್ತೋಡಿಯ ಮಹಾವಿಷ್ಣು ದೇವಳದ ಬ್ರಹ್ಮಕಲಶೋತ್ಸವವು ಇತ್ತೀಚೆಗೆ ನಡೆದ ಸಂದರ್ಭದಲ್ಲಿ ಮಕ್ಕಳು ಸ್ವಯಂ ಸೇವಕರಾಗಿ ಓಡಾಡಿದರು. ಜಾತ್ರೆಯ ಅಂಗಳದಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕಿ ಸ್ವಚ್ಛಗೊಳಿಸಿದ್ದಲ್ಲದೆ ಕಸ ಎಸೆದರನ್ನು ವಿನಂತಿಸಿ ಅವರಿಂದಲೇ ಹೆಕ್ಕಿಸಿ ಹತ್ತಿರದ ಕಸದಬುಟ್ಟಿಗೆ ಎಸೆಯುವಂತೆ ಮಾಡಿದ್ದಾರೆ. ಇದರಿಂದಾಗಿ ಎಲ್ಲಾ ದಿನಗಳಲ್ಲೂ ಕಾಯರ್ತೋಡಿಯ ಬ್ರಹ್ಮಕಲಶವು ಸ್ವಚ್ಛವಾಗಿದ್ದುದು ಕಂಡುಬಂತು. ಮಕ್ಕಳ ಮಾತಿಗೆ ಯಾವಾಗಲೂ ಬೆಲೆ ಇರುತ್ತದೆ. ಮಕ್ಕಳು ವಿನಂತಿಯ ಭಾಷೆಯಲ್ಲಿ ಹೇಳಿದಾಗ ಹಿರಿಯರೂ ಮನ್ನಿಸಿ ತಾವು ಕಸ ಎಸೆದದ್ದು ಸರಿಯಲ್ಲವೆಂದು ಒಪ್ಪುತ್ತಾರೆ. ಒಮ್ಮೆ ಎಗರಾಡಿದವರೂ ಮತ್ತೆ ಮಕ್ಕಳನ್ನು ಹತ್ತಿರ ಕರೆದು “ನಿಮ್ಮ ಕೆಲಸ ಬಹಳ ಒಳ್ಳೆಯದು’ ಎಂದು ಮಕ್ಕಳ ಬೆನ್ನು ತಟ್ಟಿದವರಿದ್ದಾರೆ. ಉತ್ಸವದ ಎಲ್ಲಾ ದಿನಗಳಲ್ಲಿ ಮಕ್ಕಳಿಗೆ ಧೈರ್ಯ ನೀಡಲು ಸ್ವತಃ ಡಾ. ದಾಮ್ಲೆಯವರು ಭಾಗವಹಿಸಿದ್ದಲ್ಲದೆ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆಯವರು, ಸವಿತಾ ಟೀಚರ್ ಹಾಗೂ ಶಿಕ್ಷಕ ದೇವಿಪ್ರಸಾದ್ ಇದ್ದರು.
ಇಂತಹ ಒಂದು ಸ್ವಯಂ ಸೇವೆಯ ಕೆಲಸ ಮಾಡಲು ಮಕ್ಕಳು ಇಷ್ಟಪಡುತ್ತಾರೆ. ಇಲ್ಲಿ ನಾನು ಮಕ್ಕಳಿಗೆ ಈ ಪ್ರಯತ್ನದಲ್ಲಿ ಎದುರಿಸಬೇಕಾದ ಸವಾಲುಗಳು ಹಾಗೂ ನಲ್ನುಡಿಗಳಿಂದ ಒಪ್ಪಿಸುವ ಉಪಾಯಗಳನ್ನು ಕಿರು ಪ್ರಹಸನಗಳ ಮೂಲಕ ಹೇಳಿಕೊಟ್ಟಿದ್ದೆ. ಅದರಿಂದಾಗಿ ಮಕ್ಕಳು ಯೋಜಿತ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು ಎಂಬುದಾಗಿ ದಾಮ್ಲೆಯವರು ಹೇಳುತ್ತಾರೆ. ಕಸ ಹಾಕದಿರುವ ಗುಣವು ಜನರಲ್ಲಿ ಬೆಳೆದರೆ ಸ್ವಚ್ಛತೆಯೊಂದು ಸಮಸ್ಯೆಯೇ ಆಗುವುದಿಲ್ಲ ಎಂಬುದು ಅವರ ಅಭಿಪ್ರಾಯ. ಇದೇ ಉಪಾಯವನ್ನು ಎಲ್ಲ ಊರುಗಳಲ್ಲಿ ಮಾಡಿದಾಗ ಅಲ್ಲಿಯ ಮಕ್ಕಳಲ್ಲೇ ಕಸವನ್ನು ಕಿಸೆಗೆ ಹಾಕುವ ಸ್ವಭಾವ ಬೆಳೆಯುತ್ತದೆ. ಮುಂದೆ ಅವರೇ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯುತ್ತಾರೆ ಎನ್ನುತ್ತಾರೆ ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆಯವರು. ಸ್ನೇಹ ಶಾಲೆಯ ಮಕ್ಕಳ ಈ ಕಾರ್ಯವನ್ನು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಶ್ರೀ ವಿನಯ್ ಕುಮಾರ್ ಕಂದಡ್ಕ, ಮುಖ್ಯಾಧಿಕಾರಿ ಶ್ರೀ ಸುಧಾಕರ್, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಮತ್ತು ಗ್ರೀನ್ ಹೀರೊ ಆಫ್ ಇಂಡಿಯಾ ಖ್ಯಾತಿಯ ಶ್ರೀ ಆರ್.ಕೆ. ನಾಯರ್ ಅವರು ಪ್ರಶಂಸಿಸಿದ್ದಾರೆ. ಮಕ್ಕಳಿಗೆ ಶ್ವೇತ ಶಾಲುಗಳನ್ನು ವಿತರಿಸಿ ಸ್ಬಚ್ಛತೆಯ ಸೈನಿಕರಾಗಲು ಕಾಯರ್ತೋಡಿ ದೇವಾಲಯದ ಅಂಗಳದಲ್ಲಿ ಸೂಚನೆಗಳನ್ನು ಡಾ.ದಾಮ್ಲೆಯವರು ನೀಡಿದರು