ನ್ಯೂಸ್ ನಾಟೌಟ್: ಕಳೆದ ಎರಡು ದಿನಗಳ ಹಿಂದೆ ಕಲುಷಿತ ಆಹಾರ ಸೇವನೆ ಶಂಕೆಯಿಂದ ಮಂಗಳೂರಿನ ನರ್ಸಿಂಗ್ ಕಾಲೇಜು ಒಂದರ 100ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆಗೆ ನಿಖರವಾದ ಕಾರಣ ತಿಳಿಯಬೇಕಾದರೆ ಇನ್ನೂ ಒಂದು ವಾರ ಕಾಲ ಕಾಯಲೇಬೇಕು. ಕಾರಣ ದಕ್ಷಿಣಕನ್ನಡ ಜಿಲ್ಲೆಯಲ್ಲಿಅಗತ್ಯವಾದ ಆಹಾರ ಮತ್ತು ನೀರು ವಿಶ್ಲೇಷಣೆ ಪ್ರಯೋಗಾಯವೇ ಇಲ್ಲ. ಇದರಿಂದ ಬೆಂಗಳೂರು ಅಥವಾ ಮೈಸೂರಿನ ಪ್ರಯೋಗಾಲಯನ್ನು ಅವಲಂಬಿಸಬೇಕಿದೆ.
ರಾಜ್ಯದಲ್ಲಿ ಮೈಸೂರು, ಬೆಂಗಳೂರು, ಹುಬ್ಬಳ್ಳಿ – ಧಾರವಾಡ, ಬೆಳಗಾವಿಯಲ್ಲಿ ಮಾತ್ರ ಆಹಾರ ಮತ್ತು ನೀರು ವಿಶ್ಲೇಷಣೆ ಪ್ರಯೋಗಾಲಯವಿದೆ. ಪ್ರತಿ ಜಿಲ್ಲೆಗೆ ಒಂದರಂತೆ ಇಂಥ ತಪಾಸಣಾ ಪ್ರಯೋಗಾಲಯ ಅಗತ್ಯವಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸರ್ಕಾರಕ್ಕೆ ಸಮಯ ಕೂಡಿ ಬಂದಿಲ್ಲ. ಮಂಗಳೂರಿನ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೆಲ್ನಲ್ಲಿ ತಯಾರಿಸಿದ ಆಹಾರದ ಸ್ಯಾಂಪಲ್ಗಳನ್ನು ಬೆಂಗಳೂರಿನ ಲ್ಯಾಬ್ಗೆ ಕಳುಹಿಸಿಕೊಡಲಾಗಿದೆ. ವರದಿಗೆ ಕನಿಷ್ಠ ಒಂದು ವಾರ ಕಾಯಬೇಕಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ ಸುರಕ್ಷತಾ ನಿಯಮದ ಪ್ರಕಾರ ಯಾವುದೇ ಆಹಾರ ಉದ್ಯಮ, ಹೋಟೆಲ್, ಕ್ಯಾಟರಿಂಗ್ ಸೇರಿದಂತೆ ಆಹಾರಕ್ಕೆ ಸಂಬಂಧಿಸಿದ ಯಾವುದೇ ಉತ್ಪಾದನಾ ಘಟಕ ಆರಂಭಿಸುವಾಗ ಅಥವಾ ಆಹಾರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಆಹಾರ ತಪಾಸಣೆಯನ್ನು ನಡೆಸಬೇಕು. ಆದರೆ ಈ ತಪಾಸಣೆಗೆ ಅಗತ್ಯವಾದ, ಮಾನ್ಯತೆ ಪಡೆದ ಆಹಾರ ಮತ್ತು ನೀರು ವಿಶ್ಲೇಷಣೆ ಪ್ರಯೋಗಾಲಯ ಅಗತ್ಯವಿದೆ.