ನ್ಯೂಸ್ ನಾಟೌಟ್: ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತೆ ಹರಿಹಾಯ್ದಿದ್ದಾರೆ. ಮನಬಂದಂತೆ ಟೀಕಿಸಿದ್ದಲ್ಲದೆ ಕಾಂಗ್ರೆಸ್ ಪಕ್ಷವೇ ಭಯೋತ್ಪಾದಕ ಸಂಘಟನೆ ಎಂದು ಟೀಕಿಸಿದ್ದಾರೆ. ತುಷ್ಟೀಕರಣ ನೀತಿಯಿಂದಲೇ ಮತೀಯ ಗಲಭೆಗಳು ಸಂಭವಿಸಿವೆ ಎಂದು ಕಟೀಲ್ ಆರೋಪಿಸಿದ್ದಾರೆ.
ಮಂಗಳವಾರ ಮಾಧ್ಯಮದವರ ಜತೆ ಮಾತನಾಡಿದ ಕಟೀಲ್, ‘ಬಿಜೆಪಿ ಅವಧಿಯಲ್ಲಿ ಹಿಂದೂಗಳ ಅತಿ ಹೆಚ್ಚು ಹತ್ಯೆ ಆಗಿದೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಹೀಗೆ ಪ್ರತಿಕ್ರಿಯಿಸಿದರು. ‘ಕಾಂಗ್ರೆಸ್ ಆಡಳಿತ ಮತೀಯ ಗಲಭೆಗೆ ಪ್ರೇರಣೆ ನೀಡಿತ್ತು. ಪಿ.ಎಫ್.ಐ. ಕಾರ್ಯಕರ್ತರನ್ನು ಜೈಲಿನಿಂದ ಸಿದ್ದರಾಮಯ್ಯ ಬಿಡುಗಡೆ ಮಾಡಿಸಿದ್ದರು. ಸಿದ್ದರಾಮಯ್ಯ ಆಡಳಿತ ಕಾಲದಲ್ಲಿ 25 ಮಂದಿ ಹಿಂದೂಗಳ ಹತ್ಯೆಯಾಗಿತ್ತು’ ಎಂದರು. ‘ಮೂರು ಜಿಲ್ಲೆಯಲ್ಲಷ್ಟೆ ಪ್ರಭಾವ ಹೊಂದಿರುವ ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುವ ಕನಸು ಹೊತ್ತು ತಿರುಗಾಡುತ್ತಿದ್ದಾರೆ. ಅಧಿಕಾರಕ್ಕೆ ಏರಲಾಗದು ಎಂಬುದು ಅರಿವಾಗುತ್ತಿದ್ದಂತೆ ಜಾತಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.