ನ್ಯೂಸ್ನಾಟೌಟ್: 16 ವರ್ಷದ ಬಾಲಕ 58 ವರ್ಷದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆಕೆಯ ಬಾಯಿಯನ್ನು ಬಿಗಿದು ಬರ್ಬರವಾಗಿ ಹೊಡೆದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಎರಡು ವರ್ಷಗಳ ಹಿಂದೆ ಮೊಬೈಲ್ ಫೋನ್ ಕಳ್ಳತನದ ಪರಿಣಾಮವಾಗಿ ಆ ಬಾಲಕನನ್ನು ಈ ಮನೆಯವರು ಶಂಕಿಸಿ ಆರೋಪಿಸಿದ್ದರು ಎಂದು ಪೊಲೀಸರು (ಫೆಬ್ರವರಿ ೫) ಭಾನುವಾರ ತಿಳಿಸಿದ್ದಾರೆ.
ಕೈಲಾಸಪುರಿ ಗ್ರಾಮದ ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ 30 ರಂದು ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ನಡೆದದ್ದಾದರೂ ಏನು?
ಯಾರು ಇಲ್ಲದ ಸಮಯ ನೋಡಿ ಬಾಲಕ ಆಕೆಯ ಬಾಯಿಗೆ ಪ್ಲಾಸ್ಟಿಕ್ ಚೀಲ ಮತ್ತು ಬಟ್ಟೆಯನ್ನು ತುಂಬಿ, ಆಕೆ ವಾಸವಿದ್ದ ಕಟ್ಟಡದ ನಿರ್ಮಾಣ ಹಂತದ ಪ್ರದೇಶಕ್ಕೆ ಎಳೆದೊಯ್ದು, ಆಕೆಯ ತಲೆ ಮತ್ತು ದೇಹದ ಇತರ ಭಾಗಗಳಿಗೆ ಕಡಗೋಲಿನಿಂದ ಹೊಡೆದು ಆಕೆಯ ಖಾಸಗಿ ಭಾಗಗಳಿಗೆ ಗಾಯಗೊಳಿಸಿದ್ದಾನೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಣ ಇನ್ನೂ ನಿಗೂಢ:
ಎರಡು ವರ್ಷಗಳ ಹಿಂದೆ ಬಾಲಕ ಮೊಬೈಲ್ ಫೋನ್ ಕದ್ದಿದ್ದಾನೆ ಎಂದು ಮಹಿಳೆಯ ಮನೆಯವರು ಆರೋಪಿಸಿದ್ದರು ಮತ್ತು ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಹುಡುಗ ಬಯಸಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಮತ್ತು ಫೋರೆನ್ಸಿಕ್ ತಂಡವು ಸ್ಥಳಕ್ಕೆ ಧಾವಿಸಿದ್ದು, ಮಹಿಳೆಯನ್ನು ಅಪರಿಚಿತ ವ್ಯಕ್ತಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಿದ್ದು. ಮಾಹಿತಿದಾರರ ಸುಳಿವು ಮತ್ತು ತನಿಖೆಯ ಆಧಾರದ ಮೇಲೆ, ಪೊಲೀಸರು ಆಕೆಯ ನೆರೆಹೊರೆಯಲ್ಲಿ ವಾಸಿಸುವ ಹುಡುಗನನ್ನು ಹುಡುಕಿದ್ದಾರೆ.
ಎರಡು ವರ್ಷಗಳ ಹಿಂದೆ ದೂರದರ್ಶನ ವೀಕ್ಷಿಸಲು ತಮ್ಮ ಮನೆಗೆ ಬರುತ್ತಿದ್ದ ಬಾಲಕನ ಮೇಲೆ ಮಹಿಳೆಯ ಕುಟುಂಬದ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಆಕೆಯ ಮನೆಯವರು ಮೊಬೈಲ್ ಫೋನ್ ಕದ್ದಿದ್ದಾರೆ ಎಂದು ಆರೋಪಿಸಿದ್ದು ಹುಡುಗ ಮತ್ತು ಕುಟುಂಬದ ನಡುವೆ ದ್ವೇಷಕ್ಕೆ ಕಾರಣವಾಯಿತು ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.