ನ್ಯೂಸ್ನಾಟೌಟ್: ರಾಜ್ಯದಲ್ಲಿ ಪದೇ ಪದೆ ಬ್ರಾಹ್ಮಣರ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಇದೀಗ ಬ್ರಾಹ್ಮಣರು ಮುಖ್ಯಮಂತ್ರಿ ಪಟ್ಟವನ್ನು ಏರುವ ಕುರಿತ ಚರ್ಚೆ ಮುನ್ನಲೆಗೆ ಬಂದಿದೆ. ಬ್ರಾಹ್ಮಣ ಸಮುದಾಯದವರು ಸಿಎಂ ಆಗಬಾರದೇಕೆ? ಬ್ರಾಹ್ಮಣರು ಈ ದೇಶದ ಪ್ರಜೆಗಳಲ್ಲವೇ? ಈ ಸಮುದಾಯದವರು ಸಿಎಂ ಆಗಬಾರದೇಕೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮವರ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಬ್ರಾಹ್ಮಣರು ಅಲ್ಪಸಂಖ್ಯಾತರಾಗಿದ್ದಾರೆ. ಹಿಂದಿನಿಂದಲೂ ಅವರ ವಿರುದ್ಧ ಏನೇ ಮಾತನಾಡಿದರೂ ನಡೆಯುತ್ತದೆ ಎಂಬ ಭಾವನೆ ಕೆಲವರಲ್ಲಿದೆ. ಬ್ರಾಹ್ಮಣರು ಈ ದೇಶದ ಪ್ರಜೆಗಳಲ್ಲವೇ? ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಎಷ್ಟು ಮಂದಿಗೆ ಟಿಕೆಟ್ ನೀಡಲಾಗಿದೆ. ಎಷ್ಟು ಶಾಸಕರಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಂದು ಧರ್ಮವನ್ನು ದೂಷಿಸುವುದು ಸರಿಯಲ್ಲ, ಯಾವ ಧರ್ಮದವರಿಗೂ ಅನ್ಯಾಯವಾಗಬಾರದು ಎಂದಿದ್ದಾರೆ.