ನ್ಯೂಸ್ ನಾಟೌಟ್ : ಬಾಲಕಿಯ ಹೊಟ್ಟೆಯಿಂದ ಒಂದು ಕಿಲೋಗೂ ಹೆಚ್ಚು ಕೂದಲನ್ನು ವೈದ್ಯರು ತೆಗೆದಿದ್ದು,ಬೆಚ್ಚಿ ಬೀಳಿಸುವ ಘಟನೆ ವರದಿಯಾಗಿದೆ.ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಗುಡಿವಾಡದಲ್ಲಿರುವ ಶ್ರೀರಾಮ ನರ್ಸಿಂಗ್ ಹೋಂಗೆ ದಾಖಲಾಗಿದ್ದ ಬಾಲಕಿಯ ಹೊಟ್ಟೆಯಿಂದ ಕೂದಲನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ.
ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಯು ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡು ಕಂಗಾಲಾಗಿದ್ದಳು.ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ವೇಳೆ ತೂಕ ಕೂಡ ಕಡಿಮೆಯಾಗಿತ್ತು ಎಂದು ಹೇಳಲಾಗಿದೆ. ಹೀಗಾಗಿ ಈಕೆ ಕುಟುಂಬಸ್ಥರು ತಕ್ಷಣ ಗುಡಿವಾಡದ ಖಾಸಗಿ ನರ್ಸಿಂಗ್ ಹೋಂಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಎಂಡೋಸ್ಕೋಪಿ ಮತ್ತು ಸ್ಕ್ಯಾನಿಂಗ್ ಮಾಡಿ ಬಾಲಕಿಯ ಹೊಟ್ಟೆಯಲ್ಲಿ ಕಪ್ಪು ಗಡ್ಡೆ ಇರುವುದನ್ನು ಕಂಡು ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದ್ದಾರೆ.ಇನ್ನು ಬಾಲಕಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಒಂದು ಕಿಲೋ ಗಡ್ಡೆ ತೆಗೆಯಲಾಗಿದೆ. ವೈದ್ಯರು ಇದನ್ನು ಕೂದಲು ಉಂಡೆ ಎಂದು ಗುರುತಿಸಿದ್ದಾರೆ.
ಸಾಮಾನ್ಯವಾಗಿ ಟ್ರೈಕೋಬಿಝೋರ್ ಕಾಯಿಲೆಯಿಂದ ಕೆಲವರಿಗೆ ಚಿಕ್ಕಂದಿನಿಂದಲೂ ಕೂದಲು ತಿನ್ನುವ ಅಭ್ಯಾಸವಿರುತ್ತದೆ. ಹುಡುಗಿ ಬಹಳಷ್ಟು ಕೂದಲುಗಳನ್ನು ತಿನ್ನುತ್ತಿದ್ದಳು.ಆದ್ದರಿಂದ ಅವು ಹೊಟ್ಟೆಯಲ್ಲಿ ಸಂಗ್ರಹಗೊಂಡು ಜೀರ್ಣಾಂಗದಲ್ಲಿ ದೊಡ್ಡ ಗಡ್ಡೆಯಾಗಿ ಮಾರ್ಪಟ್ಟಿವೆ ಎಂದು ವೈದ್ಯರು ಹೇಳಿದ್ದಾರೆ.ವೈದ್ಯ ಪೊಟ್ಲೂರಿ ವಂಶಿಕೃಷ್ಣ ಎಂಬುವವರು ಎಂಡೋಸ್ಕೋಪಿ ಸೇರಿದಂತೆ ಹಲವು ಪ್ಯಾಥಲಾಜಿಕಲ್ ಪರೀಕ್ಷೆಗಳನ್ನು ನಡೆಸಿ ಆಕೆಗೆ ಕೂದಲು ತಿನ್ನುವ ಅಭ್ಯಾಸವಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.