ನ್ಯೂಸ್ ನಾಟೌಟ್ :ಯಶಸ್ವಿನಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್. ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯ ಹೊಸ ಸದಸ್ಯರನ್ನು ನೋಂದಾಯಿಸುವ ಅವಧಿಯನ್ನು ಫೆ.28 ರವರೆಗೆ ವಿಸ್ತರಿಸಲಾಗಿದೆ. 2022-23ನೇ ಸಾಲಿಗೆ ಹೊಸ ಸದಸ್ಯರನ್ನು ನೋಂದಾಯಿಸುವ ಅವಧಿ 2023ರ ಜನವರಿ 31 ಕಡೆಯ ದಿನವಾಗಿತ್ತು. ಆದರೀಗ ಫೆ.28 ರವರೆಗೆ ವಿಸ್ತರಿಸಲಾಗಿದೆ.
ಈ ಕುರಿತು ರೈತರು ಮತ್ತು ಸಹಕಾರ ಸಂಸ್ಥೆಗಳು ಅವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಯಶಸ್ವಿನಿ ಯೋಜನೆ ನೋಂದಣಿಗೆ ಈಗ ಕೊನೆಯ ದಿನಾಂಕವನ್ನು ಫೆಬ್ರವರಿ 28 ಎಂದು ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರವು ಇದಕ್ಕಾಗಿ ಪ್ರಸಕ್ತ ಆಯವ್ಯಯದಲ್ಲಿ 300 ಕೋಟಿ ರೂ. ಅನುದಾನ ನಿಗದಿ ಪಡಿಸಿದೆ.ಗ್ರಾಮೀಣ ಸಹಕಾರ ಸಂಘಗಳ, ಸ್ವ-ಸಹಾಯ ಗುಂಪುಗಳ ಗರಿಷ್ಟ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.500/- ಗಳ ವಂತಿಗೆ ಮತ್ತು ಹೆಚ್ಚುವರಿ ಪ್ರತಿಯೊಬ್ಬ ಸದಸ್ಯರಿಗೆ ರೂ.100/-ಗಳನ್ನು ಪಾವತಿಸಬೇಕು.
ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ರೂ.1,000/- ಗಳ ವಂತಿಗೆ ಮತ್ತು ಹೆಚ್ಚುವರಿ ಪ್ರತಿಯೊಬ್ಬ ಸದಸ್ಯರಿಗೆ ರೂ.200/- ಗಳನ್ನು ಪಾವತಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ ಎಂದು ಹೇಳಲಾಗಿದೆ. ಈ ಯೋಜನೆಯಡಿ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ರೂ. ವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು.