ನ್ಯೂಸ್ ನಾಟೌಟ್: ಇಂದೋರ್ನಲ್ಲಿ ಮಧ್ಯಪ್ರದೇಶ ಮತ್ತು ಆಂಧ್ರ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿಯ ಕ್ವಾರ್ಟರ್ಫೈನಲ್ ಪಂದ್ಯದ ೨ನೇ ದಿನದಾಟದ ವೇಳೆ ಆಂಧ್ರದ ಬ್ಯಾಟ್ಸ್ಮನ್ ಹನುಮ ವಿಹಾರಿ ಗಾಯದ ನಡುವೆಯೂ ತಂಡದ ಪರ ಅತ್ಯದ್ಭುತ ಪ್ರದರ್ಶನ ನೀಡಿ ಗಮನ ಸೆಳೆದರು. ಬಲಗೈ ಬ್ಯಾಟರ್ ಆಗಿರುವ ವಿಹಾರಿ, ಅನಿವಾರ್ಯವಾಗಿ ಎಡಗೈ ಬ್ಯಾಟ್ ಮಾಡಿರುವ ಅವರ ನಡೆ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದೆ.
ಸಿಡ್ನಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ವಿಹಾರಿ ಅವರು ಮಂಡಿ ರಜ್ಜು ಗಾಯದ ನಡುವೆಯೂ ಭಾರತ ತಂಡಕ್ಕೆ ನೆರವಾಗಿದ್ದರು. ಆರ್ ಅಶ್ವಿನ್ ಅವರೊಂದಿಗೆ ಕೂಡಿ ಬ್ಯಾಟ್ ಮಾಡಿದ್ದ ಅವರು ತಂಡವನ್ನು ಸೋಲಿನಿಂದ ಪಾರು ಮಾಡಲು ಸೆಣಸಾಟ ನಡೆಸಿದ್ದರು. ಸದ್ಯ ರಣಜಿ ಪಂದ್ಯದಲ್ಲಿ ಅವೇಶ್ ಖಾನ್ ಅವರ ಬೌನ್ಸರ್ ಎದುರಿಸುವ ವೇಳೆ ಎಡ ಮುಂಗೈ ಮುರಿತಕ್ಕೆ ಒಳಗಾಗಿ ಅವರು ಅಂಗಣದಿಂದ ನಿರ್ಮಿಸಿದ್ದರು. ಆದರೆ, ತಂಡ ಬ್ಯಾಟಿಂಗ್ನಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ ಮತ್ತೆ ಬ್ಯಾಟ್ ಮಾಡಲು ಅಂಗಣಕ್ಕೆ ಬಂದು ಅಚ್ಚರಿ ಮೂಡಿಸಿದ್ದರು. ಗಾಯದ ಕಾರಣದಿಂದ ಬಲಗೈ ಬ್ಯಾಟಿಂಗ್ ಮಾಡಲಾಗದೇ ಎಡಗೈ ಬ್ಯಾಟಿಂಗ್ ಮಾಡಿ ಪ್ರತಿರೋಧ ತೋರಿದರು. ವಿಹಾರಿ ಅವರ ಕಚ್ಚೆದೆಯ ಆಟ ಈಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. 37 ಎಸೆತಗಳಲ್ಲಿ 16 ರನ್ ಗಳಿಸಿ ಆಡುತ್ತಿದ್ದಾಗ ವಿಹಾರಿ ಅವರಿಗೆ ಗಾಯವಾಗಿತ್ತು. ಸ್ಕ್ಯಾನ್ ಮಾಡಲೆಂದು ಅವರನ್ನು ಕರೆದೊಯ್ಯಲಾಗಿತ್ತು. ಅವರ ಮುಂಗೈ ಮುರಿತವಾಗಿರುವುದು ಎಕ್ಸ್-ರೇಯಿಂದ ಗೊತ್ತಾಗಿತ್ತು. ವಿಹಾರಿ ಅವರಿಗೆ ನಾಲ್ಕು ವಾರಗಳ ವಿಶ್ರಾಂತಿ ಸೂಚಿಸಲಾಗಿತ್ತು ಎಂದು ತಿಳಿದು ಬಂದಿದೆ.