ನ್ಯೂಸ್ ನಾಟೌಟ್: ಇತ್ತೀಚೆಗೆ ಮನುಷ್ಯ ತನ್ನ ಸ್ವಾರ್ಥಕೋಸ್ಕರ ಕೆಟ್ಟ ದಾರಿ ಹಿಡಿಯುತ್ತಾನೆ. ಧರ್ಮದ ಹೆಸರಿನಲ್ಲಿ ಆಚಾರ-ವಿಚಾರಗಳನ್ನು ದುರುಪಯೋಗಪಡಿಸಿ ಜಾತಿ, ಮತ, ಪಂಥದ ಹೆಸರಿನಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಾನೆ. ಅಂಥ ಕಾರ್ಯಕ್ಕೆ ಇಳಿಯದೆ ಒಳ್ಳೆಯ ಜ್ಞಾನ ಪಡೆದು ಸತ್ಕಾರ್ಯಗಳನ್ನು ಮಾಡಿದರೆ ಮಾತ್ರ ಸತ್ಪ್ರಜೆಯಾಗಲು ಸಾಧ್ಯ. ಇದರಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮತ್ತು ಜಾತ್ರೋತ್ಸವ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಮಂಗಳವಾರ ಆಶೀರ್ವಚನ ನೀಡಿದರು.
ದೇವರ ಮೇಲೆ ಭಕ್ತಿಯಿಂದ ಇದ್ದರೆ ಮಾತ್ರ ಮನುಷ್ಯ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ. ಧರ್ಮಪ್ರಜ್ಞೆ ಮತ್ತು ಭಕ್ತಿ ಮಾರ್ಗದಿಂದ ನಡೆದರೆ ಬದುಕು ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸುಳ್ಯ ನಗರಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಮಾತನಾಡಿ, ದೇವಸ್ಥಾನಗಳು ಧರ್ಮದ ಸಂರಕ್ಷಣೆಯ ಪ್ರತೀಕವಾಗಿದೆ. ದೇವರನ್ನು ಮೂರ್ತಿಯಲ್ಲಿ ಮಾತ್ರ ನೋಡದೆ ಭಕ್ತಿಮಾರ್ಗದಲ್ಲೂ ಜನರ ಸೇವೆ ಮಾಡಿದರೆ ಮನುಷ್ಯನಿಗೆ ಹೆಚ್ಚಿನ ಜ್ಞಾನದ ಅರಿವು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ, ವ್ಯವಸ್ಥಾಪನ ಸಮಿತಿಯ ಪಿ.ಕೆ. ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಅನುವಂಶೀಯ ಮೊಕ್ತೇಸರ ಶ್ರೀ ಚೆನ್ನಕೇಶವ ದೇವಸ್ಥಾನ ಹರಪ್ರಸಾದ್ ತುದಿಯಡ್ಕ, ಉದ್ಯಮಿ ಸುಧಾಕರ ಕಾಮತ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಸುಮಾಧರ್ ಎ.ಟಿ. ಕೋಶಾಧಿಕಾರಿ ಹರೀಶ್ ರೈ ಉಬರಡ್ಕ, ಆರ್ಥಿಕ ಸಮಿತಿಯ ಸಂಚಾಲಕ ನಾರಾಯಣ ಕೇಕಡ್ಕ, ಉಪಾಧ್ಯಕ್ಷ ಬುದ್ಧ ನಾಯ್ಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.