ನ್ಯೂಸ್ ನಾಟೌಟ್: ಕೇಂದ್ರ ಸರಕಾರದ ಬಜೆಟ್ ನಲ್ಲಿ ಕರ್ನಾಟಕಕ್ಕೂ ದೊಡ್ಡ ಪಾಲು ಸಿಕ್ಕಿದೆ. ಬರಗಾಲ ಪೀಡಿತ ಪ್ರದೇಶಗಳಿಗೆ ನೀರಾವರಿ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ನಿರ್ಮಲಾ ಸೀತಾರಾಮನ್ ₹ 5,300 ಕೋಟಿ ಅನುದಾನ ಘೋಷಿಸಿದರು. ಈ ವೇಳೆ ಪ್ರತಿಪಕ್ಷಗಳಿಂದ ಉದ್ಗಾರ ತೇಲಿಬಂತು.
ಕೃಷಿಸಾಲದ ಗುರಿ ₹ 20 ಲಕ್ಷ ಕೋಟಿಗೆ ಹೆಚ್ಚಳ
ಗ್ರಾಮೀಣ ಆರ್ಥಿಕತೆಯ ಬಗ್ಗೆ ಈ ಬಾರಿಯ ಬಜೆಟ್ ವಿಶೇಷ ಗಮನ ನೀಡಿದೆ. ಪಶುಸಂಗೋಪನೆ, ಡೇರಿ ಮತ್ತು ಮೀನುಗಾರಿಕೆಯನ್ನೂ ಒಳಗೊಂಡಂತೆ ಕೃಷಿಸಾಲಕ್ಕಾಗಿ ₹ 20 ಲಕ್ಷ ಕೋಟಿ ಮೀಸಲಿಡಲಾಗಿದೆ.
ಮೀನುಗಾರರು, ಕರಕುಶಲಕರ್ಮಿಗಳಿಗೆ ಉತ್ತೇಜನ
ಪಿಎಂ ಮತ್ಸ್ಯ ಸಂಪದ ಯೋಜನೆಯಡಿ ₹ 6,000 ಕೋಟಿ ಮತ್ತದ ಅನುದಾನವನ್ನು ಮೀನುಗಾರಿಕೆಯ ಉತ್ತೇಜನಕ್ಕೆ ಮೀಸಲಿಡಲಾಗುವುದು. ಪಿಎಂ ವಿಶ್ವಕರ್ಮ ಕೌಶಲ ಸನ್ಮಾನ್ ಯೋಜನೆಯಡಿ ಪಾರಂಪರಿಕ ಕರಕುಶಲಕರ್ಮಿಗಳಿಗೆ ನೆರವಾಗಲು ಕಾರ್ಯಕ್ರಮ ರೂಪಿಸಲಾಗುವುದು. ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮಗಳೊಂದಿಗೆ ಇವರನ್ನು ಜೋಡಿಸಿ, ಕುಶಲಕರ್ಮಿಗಳ ಅರ್ಥಿಕ ಸ್ಥಿತಿಗತಿ ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಆರೋಗ್ಯ ಕ್ಷೇತ್ರಕ್ಕೆ ಹೊಸ ಬಲ
ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಸಚಿವರು ಹಲವು ಹೊಸ ಕ್ರಮಗಳನ್ನು ಘೋಷಿಸಿದರು. 2015ರಿಂದ ಆರಂಭವಾಗಿರುವ ಹೊಸ ಮೆಡಿಕಲ್ ಕಾಲೇಜುಗಳಿಗೆ ಹತ್ತಿರದಲ್ಲಿಯೇ ಹೊಸದಾಗಿ 157 ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಲಾಗುವುದು. ಸಿಕಲ್ ಸೆಲ್ ಅನಿಮಿಯಾ ಕಾಯಿಲೆಯನ್ನು 2047ರ ಒಳಗೆ ನಿರ್ಮೂಲನೆ ಮಾಡಲಾಗುವುದು. ಐಸಿಎಂಆರ್ ಲ್ಯಾಬ್ಗಳನ್ನು ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಸಂಶೋಧನೆಗೆ ಒದಗಿಸಲಾಗುವುದು. ಔಷಧ ವಿಜ್ಞಾನದಲ್ಲಿ ಸಂಶೋಧನೆಗೆ ಉತ್ತೇಜನ ನೀಡಲು ಹೊಸ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸಚಿವರು ಘೋಷಿಸಿದರು.
ಕೇಂದ್ರ ಸರಕಾರದ ಈ ಬಜೆಟ್ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ೫,೩೦೦ ಕೋಟಿ ರೂ. ಅನುದಾನ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕದ ಸಮಸ್ತ ಜನರ ಪರವಾಗಿ ಧನ್ಯವಾದಗಳು ಎಂದು ಬೊಮ್ಮಾಯಿ ತಿಳಿಸಿದರು.