ನ್ಯೂಸ್ ನಾಟೌಟ್ : ‘ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್ ಹತ್ಯೆ ನಡೆಸಲಾಗಿದೆ’ ಎಂದು ಹೇಳಿಕೆ ನೀಡಿರುವ ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಫಾಝಿಲ್ ಅವರ ತಂದೆ ಸುರತ್ಕಲ್ ಮಂಗಳಪೇಟೆಯ ಉಮರ್ ಫಾರೂಕ್ ಅವರು ಒತ್ತಾಯಿಸಿದ್ದಾರೆ.ಅವರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದರು.
‘ಫಾಝಿಲ್ ಹತ್ಯೆಯನ್ನು ನಿನ್ನೆ ನಡೆದ ಸಮಾವೇಶದಲ್ಲಿ ಶರಣ್ ಪಂಪ್ವೆಲ್ ಸಮರ್ಥಿಸಿಕೊಂಡಿದ್ದಾರೆ. ನನ್ನ ಮಗನ ಹತ್ಯೆ ವಿಚಾರವಾಗಿ ಅವರಿಗೆ ಹೆಚ್ಚಿನ ಮಾಹಿತಿ ಇದೆ. ಹಾಗಾಗಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು’ಎಂದು ಉಮರ್ ಫಾರೂಕ್ ಒತ್ತಾಯಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆ ಮಾಡಲಾಗಿದೆ ಎಂದು ವಿಹೆಚ್ಪಿ ಮುಖಂಡ ಶರಣ್ ಪಂಪ್ವೆಲ್ ಹೇಳಿದ್ದರು. ಉಳ್ಳಾಲದಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಈ ಹೇಳಿಕೆ ನೀಡಿದ್ದರು. ಅಗತ್ಯ ಬಿದ್ದರೆ ಭಜರಂಗದಳ ಹೋರಾಟ ಮಾಡುತ್ತದೆ. ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಹಿಂದೂ ಸಮಾಜ ಕಣ್ಣೀರಲ್ಲಿ ಮುಳುಗಿತ್ತು. ಇಡೀ ಜಿಲ್ಲೆ ಒಬ್ಬ ಉತ್ತಮ ಕಾರ್ಯಕರ್ತನ ಬಲಿದಾನಕ್ಕೆ ಬೇಸರ ಪಟ್ಟಿತ್ತು. ಆಗ ನಮ್ಮ ಕಾರ್ಯಕರ್ತರು ಅವರ ಬಲಿದಾನ ನೋಡಿ ಸುಮ್ಮನೆ ಕೂರಲಿಲ್ಲ. ಸುರತ್ಕಲ್ಗೆ ಹೋಗಿ ನುಗ್ಗಿ ನುಗ್ಗಿ ಹೊಡೆದರು. ಅದು ನಮ್ಮ ಶೌರ್ಯ. ಸುರತ್ಕಲ್ನಲ್ಲಿ ಹೊಡೆದ ವಿಡಿಯೋವನ್ನ ಎಲ್ಲರೂ ನೋಡಿದ್ದೀರಾ ಎಂದಿದ್ದರು.