ನ್ಯೂಸ್ ನಾಟೌಟ್: ಇನ್ನೇನು ಕರ್ನಾಟಕ ವಿಧಾನ ಸಭಾ ಚುನಾವಣೆ ಸಮೀಪದಲ್ಲಿದೆ. ದಿನಾಂಕ ಘೋಷಣೆಯಾಗುವ ಮುನ್ನವೇ ಯಾರು ಗೆಲ್ಲಬಹುದು? ಯಾರು ಕಣಕ್ಕೆ ಇಳಿಯಬಹುದು? ಯಾರಿಗೆ ಸೀಟು ಸಿಗಬಹುದು? ಅನ್ನುವ ಜನಸಾಮಾನ್ಯರ ಚರ್ಚೆ ಜೋರಾಗಿದೆ. ಈ ನಡುವೆಯೇ ಈ ಭಾರಿ ಸುಳ್ಯದ ಸೋಲಿಲ್ಲದ ಸರದಾರ ಸುಳ್ಯದ ಬಂಗಾರ ಖ್ಯಾತಿಯ ಸಚಿವ ಎಸ್.ಅಂಗಾರ ಸ್ಪರ್ಧಿಸುವುದಿಲ್ಲ ಎನ್ನುವ ಗಾಳಿ ಸುದ್ದಿಗಳು ಹರಿದಾಡುತ್ತಿದೆ. ಆದರೆ ಈ ಬಗ್ಗೆ ಇದುವರೆಗೆ ಎಸ್.ಅಂಗಾರ ಏನನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ ವಿಚಾರ ಚರ್ಚೆಯಲ್ಲಿರುವಾಗಲೇ ಅಂಗಾರ ಬದಲಿಗೆ ಬಿಜೆಪಿಯಿಂದ ಸುಳ್ಯದ ಐವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ ಅನ್ನುವ ವಿಚಾರ ಹೊರಬಿದ್ದಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಈ ಬಾರಿ ಸುಳ್ಯ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಸತತ 6 ಬಾರಿ ಗೆದ್ದಿರುವ ಸಚಿವ ಅಂಗಾರರು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಾರೆಯೇ? ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ನಾಯಕರಿಗೆ ಮಣೆ ಹಾಕಿದೆಯೇ? ಎಂಬ ವಿಚಾರದ ಬಗ್ಗೆ ಸದ್ಯ ಪ್ರಶ್ನೆಗಳು ಎದ್ದಿವೆ. ಹೀಗಾಗಿ ಈ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದತ್ತ ಎಲ್ಲರ ಚಿತ್ತ ನೆಟ್ಟಿದೆ. ಬಿಜೆಪಿಯಿಂದ ಉತ್ತಮ ವಿದ್ಯಾವಂತ ಯುವ ಪೀಳಿಗೆಯನ್ನು ಕಣಕ್ಕಿಳಿಸಲು ಬಿಜೆಪಿ ಮತ್ತು ಸಂಘ-ಪರಿವಾರ ಕೆಲ ಹೆಸರುಗಳನ್ನು ಸೂಚಿಸಿದೆ ಎನ್ನಲಾಗಿದೆ. ಅದರಲ್ಲಿ ಮೊದಲು ಕೇಳಿ ಬರುತ್ತಿರುವ ಹೆಸರುಶಿವಪ್ರಸಾದ್ ಪೆರುವಾಜೆ. ರೇಸ್ ನಲ್ಲಿ ಮುಂಚೂಣಿ ಯಲ್ಲಿರುವ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಇವರೂ ಒಬ್ಬರು. ಸಂಘಟನೆ ಹಿನ್ನಲೆಯಳ್ಳ ವ್ಯಕ್ತಿ. ಖಾಸಗಿ ಸಹಕಾರ ಸಂಘದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಯುವಕರಿಗೆ ಮನ್ನಣೆ ನೀಡಬೇಕೆನ್ನುವ ಕೂಗು ವ್ಯಾಪಕವಾದ ಹಿನ್ನಲೆ ಇವರ ಹೆಸರು ಚಾಲ್ತಿಯಲ್ಲಿದೆ. ಮತ್ತೊಬ್ಬರು ಪದ್ಮ ಕುಮಾರ್. ಇವರ ಹೆಸರು ಕೂಡ ಮುನ್ನಲೆಗೆ ಬಂದಿದೆ. ಹರಿಹರ ಪಲ್ಲತ್ತಡ್ಕ ನಿವಾಸಿ. ವೃತ್ತಿ ಯಲ್ಲಿ ಉಪನ್ಯಾಸಕರು, ಉತ್ತಮ ವಾಗ್ಮಿ, ABVP ಒಡನಾಟವಿದೆ. ಇವರಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಮೂರನೇ ಹೆಸರು ಸೀತಾರಾಮ್ ಭರಣ್. ಕಳೆದ ಅನೇಕ ತಿಂಗಳಿನಿಂದ ಸುಳ್ಯ ಕ್ಷೇತ್ರದಲ್ಲಿ ಇವರ ಹೆಸರು ಚಾಲ್ತಿಯಲ್ಲಿದೆ. ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವವರು. ಉತ್ತಮ ಭಾಷಣಕಾರ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಸದ್ಯ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಇನ್ನು ವಿಶ್ವಹಿಂದೂ ಪರಿಷತ್ ನಲ್ಲಿ ತೊಡಗಿಸಿಕೊಂಡಿರುವ ನವೀನ್ ನೆರಿಯ ಇವರ ಹೆಸರು ಕೂಡ ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ಒಂದು ವೇಳೆ ಹೊರಗಿನ ಅಭ್ಯರ್ಥಿ ಗಳಿಗೆ ಮಣೆ ಹಾಕಿದ್ರೆ ಅವಕಾಶ ಸಿಗಬಹುದು. ಐದನೇಯದಾಗಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೆಸರು ಅಲ್ಲಲ್ಲಿ ಕೇಳಿ ಬರುತ್ತಿದೆ.ಮಹಿಳಾ ಕೋಟಾ ಮತ್ತು ರಾಜ್ಯಾಧ್ಯಕ್ಷ ಕಟಿಲ್ ರ ಆಪ್ತ ವಲಯ ದಲ್ಲಿ ಗುರುತಿಸಿಕೊಂಡಿರುವುದು ಪ್ಲಸ್ ಪಾಯಿಂಟ್.
ಸುಳ್ಯದಲ್ಲಿ ಮೊದಲಿನಿಂದಲೂ ಕಮಲ ಪಕ್ಷಕ್ಕೆ ಯಾರನ್ನೇ ನಿಲ್ಲಿಸಿದರೂ ಗೆಲ್ಲುವ ಶಕ್ತಿಯಿದೆ. ಹಿಂದುತ್ವ ಅಲೆ ಸುಳ್ಯ ತಾಲೂಕಿನಲ್ಲಿ ಜೋರಾಗಿದೆ. ಅಲ್ಲದೆ ಒಕ್ಕಲಿಗ ಗೌಡರ ಪ್ರಬಲ ಕ್ಷೇತ್ರವಾದ ಸುಳ್ಯ ತಾಲೂಕಿನಲ್ಲಿ ಬಿಜೆಪಿ ಪರ ಯಾರೇ ನಿಂತರೂ ಗೆಲ್ಲುವ ಸಾಧ್ಯತೆಯೇ ಹೆಚ್ಚು ಅನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಆದರೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಉದ್ದುದ್ದ ಬಾಲದಂತೆ ಬೆಳೆಯುತ್ತಿರುವಾಗ ಯಾರಿಗೆ ಟಿಕೇಟ್ ನೀಡುವುದು ಅನ್ನುವುದೇ ಸ್ವಲ್ಪ ಕಷ್ಟವಾಗಬಹುದು. ಏಕೆಂದರೆ ಒಬ್ಬನಿಗೆ ಟಿಕೇಟ್ ನೀಡಿದರೆ ಮತ್ತೊಂದು ತಂಡಕ್ಕೆ ಅಸಮಾಧಾನ ಆಗಬಹುದು. ಬಿಜೆಪಿಯಲ್ಲಿ ಎದುರಾಗಬಹುದಾದ ಈ ಬಂಡಾಯವನ್ನು ತಡೆಯುವುದೇ ವರಿಷ್ಠರಿಗೆ ಇರುವ ದೊಡ್ಡ ಸವಾಲಾಗಿದೆ. ಇದೆಲ್ಲ ಬೇಡ ಯಥಾಸ್ಥಿತಿ ಕಾಯ್ದುಕೊಂಡು ಅಂಗಾರ ಅವರೇ ಮತ್ತೆ ಚುನಾವಣೆಗೆ ನಿಲ್ಲಲಿ ಅನ್ನುವ ನಿಲುವನ್ನು ವರಿಷ್ಠರು ಪ್ರದರ್ಶಿಸಿದರೆ ಅಂಗಾರ ಅವರು ಏಳನೇ ಬಾರಿಗೆ ಶಾಸಕರಾಗುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಸುಳ್ಯ ಕ್ಷೇತ್ರ ಈ ಬಾರಿ ಬಿಜೆಪಿ ಹಾಗೂ ಸಂಘಟನೆಗೆ ಹೊಸ ಮುಖಗಳ ಹುಡುಕಾಟದಲ್ಲಿದೆ. ಸಂಘಟನೆ– ಪಕ್ಷ ಸಮನ್ವಯ ಸಾಧಿಸಲು ಸ್ವಲ್ಪ ಕಷ್ಟಪಡಬೇಕಾಗಬಹುದು.ಆದರೆ ಚುನಾವಣೆ ಸಂದರ್ಭ ರಾಷ್ಟ್ರೀಯತೆ ಹಿತದಿಂದ ಕಾರ್ಯಕರ್ತರು ಅವೆಲ್ಲವನ್ನು ಮರೆತು ಒಂದಾಗುತ್ತಾರೆ ಅನ್ನೋ ವಿಶ್ವಾಸ ಪ್ರಮುಖರಲ್ಲಿದೆ.